ಹೈದರಾಬಾದ್: ಕಾಲೇಜಿನಲ್ಲಿ ಪರೀಕ್ಷೆಗೆ ಮುನ್ನ ವಿದ್ಯಾರ್ಥಿನಿಯರ ಬುರ್ಕಾ ತೆಗೆಸಿದ ಆಡಳಿತ ಮಂಡಳಿ; ವಿವಾದ

Update: 2023-06-17 17:12 GMT

ಹೈದರಾಬಾದ್: ಇಲ್ಲಿಯ ಸಂತೋಷ ನಗರದ ಕೆ.ವಿ.ರಂಗಾರೆಡ್ಡಿ ಕಾಲೇಜಿನಲ್ಲಿ ಶನಿವಾರ ಉರ್ದು ಮಾಧ್ಯಮ ಪದವಿ ಪರೀಕ್ಷೆಗೆ ಹಾಜರಾಗಿದ್ದ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆಗೆ ಮುನ್ನ ತಾವು ಧರಿಸಿದ್ದ ಬುರ್ಕಾ ತೆಗೆಯುವಂತೆ ತಮಗೆ ಸೂಚಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ತೆಲಂಗಾಣ ಗೃಹಸಚಿವ ಮಹಮೂದ್ ಅಲಿ ಅವರು, ಇದಕ್ಕೆ ಕಾರಣರಾದವರ ವಿರುದ್ಧ ಅಗತ್ಯ ಕ್ರಮವನ್ನು ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ತುಂಡುಡುಗೆಯನ್ನು ಧರಿಸುವ ವಿರುದ್ಧ ಅವರು ಮಹಿಳೆಯರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

‘ಕೆಲವು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ಇದನ್ನು ಮಾಡುತ್ತಿರಬಹುದು, ಆದರೆ ನಮ್ಮ ನೀತಿಯು ಸಂಪೂರ್ಣವಾಗಿ ಜಾತ್ಯತೀತವಾಗಿದೆ. ಜನರು ತಮಗೆ ಬೇಕಾದ್ದನ್ನು ಧರಿಸಬಹುದು. ಬುರ್ಕಾವನ್ನು ಧರಿಸುವಂತಿಲ್ಲ ಎಂದು ಎಲ್ಲಿಯೂ ಬರೆದಿಲ್ಲ. ನಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ ’ ಎಂದು ಸಚಿವರು ತಿಳಿಸಿದರು.

‘ನೀವು ಐರೋಪ್ಯ ಉಡುಪು ಧರಿಸಿದರೆ ಅದು ಸರಿಯಲ್ಲ. ನಾವು,ವಿಶೇಷವಾಗಿ ಮಹಿಳೆಯರು ಒಳ್ಳೆಯ ಉಡುಪುಗಳನ್ನು ಧರಿಸಬೇಕು. ಮಹಿಳೆಯರು ತುಂಡುಡುಗೆಯಲ್ಲಿದ್ದರೆ ಅದು ಸಮಸ್ಯೆಯಾಗಬಹುದು,ಅವರು ಹೆಚ್ಚು ಬಟ್ಟೆಗಳನ್ನು ಧರಿಸಿದರೆ ಯಾವುದೇ ಸಮಸ್ಯೆಯಿರುವುದಿಲ್ಲ ’ ಎಂದರು.

‘ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಬುರ್ಕಾ ತೆಗೆಯುವಂತೆ ಕಾಲೇಜು ಅಧಿಕಾರಿಗಳು ನಮ್ಮನ್ನು ಬಲವಂತಗೊಳಿಸಿದ್ದರು. ಕಾಲೇಜಿನ ಹೊರಗೆ ಬುರ್ಕಾ ಧರಿಸುವಂತೆ ಅವರು ನಮಗೆ ಸೂಚಿಸಿದ್ದರು ’ ಎಂದು ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿನಿಯೋರ್ವಳು ತಿಳಿಸಿದಳು.

ತಾವು ಬುರ್ಕಾ ಧರಿಸಿ ಪ್ರವೇಶಿಸುವುದನ್ನು ಕಾಲೇಜು ಆಡಳಿತವು ತಡೆದಿತ್ತು ಮತ್ತು ಪರೀಕ್ಷಾ ಕೇಂದ್ರದಲ್ಲಿದ್ದ ಸಿಬ್ಬಂದಿಗಳು ಬುರ್ಕಾ ತೆಗೆಯುವಂತೆ ಸೂಚಿಸಿದ್ದರು ಎಂದು ಪರೀಕ್ಷೆಗೆ ಹಾಜರಾಗಿದ್ದ ಕೆಲವು ವಿದ್ಯಾರ್ಥಿನಿಯರು ತಿಳಿಸಿದರು.

ಈ ಗೊಂದಲದಲ್ಲಿ ತಾವು ಪರೀಕ್ಷೆಗೆ ಹಾಜರಾಗುವುದನ್ನು ಸುಮಾರು ಅರ್ಧ ಗಂಟೆ ಕಾಲ ತಡೆ ಹಿಡಿಯಲಾಗಿತ್ತು. ಕೆಲವು ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಬುರ್ಕಾ ತೆಗೆದು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿದ್ದರು ಎಂದೂ ಅವರು ಆರೋಪಿಸಿದರು. ಘಟನೆಯ ಬಳಿಕ ವಿದ್ಯಾರ್ಥಿನಿಯರ ಪೋಷಕರು ಮಹಮೂದ್ ಅಲಿಯವರಿಗೆ ದೂರು ಸಲ್ಲಿಸಿದ್ದರು.

Similar News