ಯುನಿಫಾರ್ಮ್‌ ಸಿವಿಲ್‌ ಕೋಡ್‌ಗೆ ನಾವು ವಿರುದ್ಧವಾಗಿದ್ದೇವೆ,ಆದರೆ ಬೀದಿಗಿಳಿದು ಪ್ರತಿಭಟಿಸುವುದಿಲ್ಲ:ಜಮೀಯತ್ ಮುಖ್ಯಸ್ಥ

Update: 2023-06-18 15:15 GMT

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಕಾನೂನು ಆಯೋಗವು ಹೊಸದಾಗಿ ಸಮಾಲೋಚನಾ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಅದು ಅಸ್ತಿತ್ವಕ್ಕೆ ಬರಲಿದೆ ಎಂಬ ಊಹಾಪೋಹಗಳ ನಡುವೆಯೇ ಜಮೀಯತ್ ಉಲೇಮಾ-ಎ-ಹಿಂದ್ (ಅರ್ಷದ್ ಮಅದನಿ ಬಣ) ಮುಖ್ಯಸ್ಥ ಅರ್ಷದ್ ಮದನಿ ಅವರು ರವಿವಾರ ಮನವಿಯೊಂದನ್ನು ಹೊರಡಿಸಿದ್ದಾರೆ. ‘ನಾವು ಯುಸಿಸಿಯನ್ನು ವಿರೋಧಿಸುತ್ತೇವೆ,ಆದರೆ ಅದರ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದಿಲ್ಲ ’ ಎಂದು ಅವರು ಹೇಳಿದ್ದಾರೆ.

‘ಕಳೆದ 1,300 ವರ್ಷಗಳಿಂದಲೂ ನಾವು ನಮ್ಮ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದೇವೆ. ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಆದರೆ ಯುಸಿಸಿ ವಿರುದ್ಧ ಪ್ರತಿಭಟಿಸಲು ಬೀದಿಗಿಳಿಯಲು ನಾವು ಬಯಸುವುದಿಲ್ಲ. ಸ್ವಾತಂತ್ರ್ಯಾನಂತರದ ಯಾವುದೇ ಸರಕಾರವು ಅದನ್ನು ಮಾಡಿಲ್ಲ ಮತ್ತು ಅದು ಅಗತ್ಯವಿಲ್ಲ ಎಂದು ನಾವು ನಂಬಿದ್ದೇವೆ. ಪ್ರತಿಭಟನೆಗಳು ಹೆಚ್ಚಾದಷ್ಟೂ ಹಿಂದುಗಳು ಮತ್ತು ಮುಸ್ಲಿಮರು ಪರಸ್ಪರರಿಂದ ದೂರವಾಗುತ್ತಾರೆ ಮತ್ತು ದುರುದ್ದೇಶಪೂರಿತ ಜನರ ಧ್ಯೇಯವು ಈಡೇರುತ್ತದೆ ’ಎಂದು ಮದನಿ ಹೇಳಿದರು.

ಯುಸಿಸಿ ಅನುಷ್ಠಾನವು ಬಿಜೆಪಿಗೆ ಚುನಾವಣೆಗಳಲ್ಲಿ ಗೆಲ್ಲಲು ಒಂದು ಸಾಧನವಾಗಿದೆ ಅಷ್ಟೇ ಎಂದು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ನ ಅಧ್ಯಕ್ಷ ಮೌಲಾನಾ ತೌಕೀರ್ ರಝಾ ಹೇಳಿದರು.

ಯುಸಿಸಿಯು ಅನಗತ್ಯ, ಅವ್ಯವಹಾರಿಕ ಮತ್ತು ದೇಶಕ್ಕೆ ಅತ್ಯಂತ ಹಾನಿಕಾರಕ ಎಂದು ತಾನು ಪರಿಗಣಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು, ಮುಸ್ಲಿಮ್ ವೈಯಕ್ತಿಕ ಕಾನೂನು ಕುರಾನ್ ಮತ್ತು ಸುನ್ನತ್‌ ನಿಂದ ರೂಪುಗೊಂಡಿದೆ, ಹೀಗಾಗಿ ಮುಸ್ಲಿಮರಿಗೂ ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಅಧಿಕಾರವಿಲ್ಲ.

ಆದ್ದರಿಂದ ಈ ಕಾನೂನುಗಳಲ್ಲಿ ಯಾವುದೇ ಬದಲಾವಣೆಯನ್ನು ತರಲು ಸರಕಾರ ಅಥವಾ ಯಾವುದೇ ಇತರ ಬಾಹ್ಯ ಮೂಲ ಪ್ರಯತ್ನಿಸುವುದು ಸಮಾಜದಲ್ಲಿ ಕೋಲಾಹಲ ಮತ್ತು ಅವ್ಯವಸ್ಥೆಗೆ ಕಾರಣವಾಗುತ್ತದೆಯಷ್ಟೇ. ಇದನ್ನು ಯಾವುದೇ ಸಂವೇದನಾಶೀಲ ಸರಕಾರವು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಯುಸಿಸಿ ಕುರಿತು ಕಾನೂನು ಆಯೋಗದಿಂದ ಹೊಸದಾಗಿ ಸಮಾಲೋಚನಾ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ. ಹಿಂದಿನ ಕಾನೂನು ಆಯೋಗವು 2018ರಲ್ಲಿ ಯುಸಿಸಿ ಕುರಿತು ಸಮಾಲೋಚನಾ ವರದಿಯನ್ನು ಪ್ರಕಟಿಸಿತ್ತು. ವಿಚಿತ್ರವೆಂದರೆ ಈಗಿನ ಕಾನೂನು ಆಯೋಗವು ಹೊಸದಾಗಿ ಸಮಾಲೋಚನೆ ಏಕೆ ಅಗತ್ಯವಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

Similar News