ವ್ಯಕ್ತಿಯನ್ನು ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದ ಪ್ರಕರಣ: 3 ಆರೋಪಿಗಳ ವಿರುದ್ಧ ಎನ್‌ಎಸ್‌ಎ ಹೇರಿಕೆ

Update: 2023-06-19 17:54 GMT

ಭೋಪಾಲ (ಮಧ್ಯಪ್ರದೇಶ): ವ್ಯಕ್ತಿಯೊಬ್ಬರ ಕುತ್ತಿಗೆಗೆ ಹಗ್ಗ ಕಟ್ಟಿ, ನಾಯಿಯಂತೆ ಬೊಗಳುವಂತೆ ಬಲವಂತಪಡಿಸಿದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಅವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರಿದ್ದಾರೆ.

ಬಂಧಿತರನ್ನು ಸಮೀರ್, ಸಾಜಿದ್ ಮತ್ತು ಫೈಝಾನ್ ಲಾಲ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಇಸ್ಲಾಮ್‌ಗೆ ಮತಾಂತರಗೊಳ್ಳುವಂತೆ ತನ್ನನ್ನು ಬಲವಂತಪಡಿಸುತ್ತಿದ್ದರು ಎಂದು ಸಂತ್ರಸ್ತ ವಿಜಯ ರಾಮಚಂದಾನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಮೂವರಿಗೆ ಮಾದರಿ ಶಿಕ್ಷೆ ನೀಡಬೇಕೆಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪೊಲೀಸರಿಗೆ ಸೂಚಿಸಿದ್ದಾರೆ. ಅವರ ಮನೆಗಳನ್ನು ಧ್ವಂಸಗೊಳಿಸುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರನ್ನು 12 ತಿಂಗಳವರೆಗೆ ಅಥವಾ ಅದಕ್ಕಿಂತಲೂ ಹೆಚ್ಚು ಅವಧಿಗೆ ವಿಚಾರಣೆಯಿಲ್ಲದೆ ಜೈಲಿನಲ್ಲಿ ಇಡಬಹುದಾಗಿದೆ.

ಕುತ್ತಿಗೆಯಲ್ಲಿ ಹಗ್ಗ ಹೊಂದಿರುವ, ನಾಯಿಯಂತೆ ಕುಕ್ಕರುಗಾಲಲ್ಲಿ ಕುಳಿತು ಎರಡೂ ಕೈಜೋಡಿಸಿರುವ ವ್ಯಕ್ತಿಯ ವೀಡಿಯೊವೊಂದು ವೈರಲ್ ಆದ ಬಳಿಕ ಈ ಬೆಳವಣಿಗೆಗಳು ನಡೆದಿವೆ.

‘‘ಅವರು ಚೂರಿ ತೋರಿಸಿ ನನ್ನಲ್ಲಿ ಹಣ ಕೇಳಿದರು. ನನ್ನಲ್ಲಿದ್ದ 700-800 ರೂ. ಮತ್ತು ಎರಡು ಫೋನ್‌ಗಳನ್ನು ಹೆದರಿಕೆಯಿಂದ ಅವರಿಗೆ ನೀಡಿದೆ’’ ಎಂದು ಸಂತ್ರಸ್ತ ಆರೋಪಿಸಿದ್ದಾರೆ.

Similar News