ಸೌಹಾರ್ದ ಪಂದ್ಯ: ಅರ್ಜೆಂಟೀನಕ್ಕೆ ಶರಣಾದ ಇಂಡೋನೇಶ್ಯ

Update: 2023-06-20 18:01 GMT

ಜಕಾರ್ತ: ವಿಶ್ವಕಪ್ ವಿಜೇತ ಅರ್ಜೆಂಟೀನ ತಂಡವು ವಿಶ್ವದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅನುಪಸ್ಥಿತಿಯಲ್ಲಿ ಆಡಿದರೂ ಆತಿಥೇಯ ಇಂಡೋನೇಶ್ಯ ತಂಡದ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಪ್ಯಾರಿಸ್-ಸೇಂಟ್ ಜರ್ಮೈನ್ ಫಾರ್ವರ್ಡ್ ಲಿಯಾಂಡ್ರೊ ಪರೆಡೆಸ್ 38ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. 55ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಹೆಡರ್‌ನ ಮೂಲಕ ಗೋಲು ಗಳಿಸಿ ಇಂಡೋನೇಶ್ಯ ತಂಡದ ಪಂದ್ಯ ಡ್ರಾಗೊಳಿಸುವ ವಿಶ್ವಾಸಕ್ಕೆ ತಣ್ಣೀರೆರಚಿದರು. ಅರ್ಜೆಂಟೀನವು ಇದೇ ಮೊದಲ ಬಾರಿ ಇಂಡೋನೇಶ್ಯದ ಎದುರು ಆಡಿತು.

ಏಳು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಜಯಿಸಿರುವ, ಇಂಟರ್ ಮಿಯಾಮಿ ಕ್ಲಬ್‌ನೊಂದಿಗೆ ಇತ್ತೀಚೆಗೆ ಸಹಿ ಹಾಕಿರುವ ಮೆಸ್ಸಿ ಈ ಪಂದ್ಯದಿಂದ ಹೊರಗುಳಿದಿದ್ದರು. ಗೆಲೊರಾ ಬಂಗ್ ಕರ್ನೊ ಸ್ಟೇಡಿಯಮ್‌ನಲ್ಲಿ ಕೆಂಪು ಬಟ್ಟೆಗಳನ್ನು ಧರಿಸಿ ಬಂದಿದ್ದ 60,000ಕ್ಕೂ ಅಧಿಕ ಇಂಡೋನೇಶ್ಯದ ಬೆಂಬಲಿಗರು 149ನೇ ರ್ಯಾಂಕಿನ ಆತಿಥೇಯ ತಂಡವನ್ನು ಹುರಿದುಂಬಿಸಿದರು. 0-2ರಿಂದ ಸೋಲುಂಡಿದ್ದರೂ ಇಂಡೋನೇಶ್ಯ ವಿಶ್ವ ಚಾಂಪಿಯನ್ ತಂಡದ ಎದುರು ಸ್ಫೂರ್ತಿಯುತ ಪ್ರದರ್ಶನ ನೀಡಿತು.

Similar News