ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಹಲ್ಲೆ; ಪ್ರಕರಣ ದಾಖಲು

Update: 2023-06-22 07:54 GMT

ಚಿತ್ರದುರ್ಗ: ಕೆಎಸ್ಸಾರ್ಟಿಸಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಮಹಿಳೆಯೊಬ್ಬಳೊಂದಿಗೆ ಬಂದ ಮೂರು ಮಂದಿಯ ತಂಡ ಏಕಾಏಕಿ ನಿರ್ವಾಹಕನ ಮೇಲೆ ಹಲ್ಲೆ‌  ನಡೆಸಿದ್ದು, ತಡೆಯಲು ಬಂದ  ಚಾಲಕನ‌‌ ಮೇಲೂ ಸಹ ಹಲ್ಲೆ‌ ನಡೆಸಿರುರುವ ಘಟನೆ ಚಳ್ಳಕೆರೆ ಸರ್ಕಲ್ ನಲ್ಲಿ ಇಂದು ಬೆಳಿಗ್ಗೆ ನಡೆದಿರುವ ಬಗ್ಗೆ ವರದಿಯಾಗಿದೆ‌.

ಆರೋಪಿಗಳನ್ನು ಚಳ್ಳಕೆರೆ ನಿವಾಸಿಗಳಾದ ಚಂದ್ರಿಕಾ, ಮಲ್ಲಿಕಾರ್ಜುನ, ಶಿವರಾಜ, ನವೀನ ಎಂದು ಗುರುತಿಸಲಾಗಿದೆ.

ಚಾಲಕ ಮತ್ತು ನಿರ್ವಾಹಕರನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಬ್ಬಂದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ನಿರ್ವಾಹಕನ ಎದೆ ಮತ್ತು ಕೊರಳಿಗೆ ಏಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಅಥವಾ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ - 6 ರ ವಾಹನ ಸಂಖ್ಯೆ  KA 57 F-1065 ದಿನಾಂಕ: 20.06.2023 ರಂದು ರಾಯದುರ್ಗ - ಬೆಂಗಳೂರು ಅಂತರರಾಜ್ಯ ಮಾರ್ಗಕ್ಕೆ ನಿಯೋಜಿಸಲಾಗಿದ್ದು, ಇದು ಅಂತರರಾಜ್ಯದ ಏಕ ಮಾರ್ಗ ರಹದಾರಿಯ ವಾಹನವಾಗಿದ್ದು, ಮಹಿಳಾ ಪ್ರಯಾಣಿಕರು "ಶಕ್ತಿ" ಯೋಜನೆಯಡಿಯಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.

ಮಂಗಳವಾರ  ಚಳ್ಳಕೆರೆಯಿಂದ ಬಸ್ ಹತ್ತಿದ ಚಂದ್ರಿಕಾ ದಾಬಸ್‌ಪೇಟೆಗೆ ಟಿಕೆಟ್ ಕೇಳಿದಾಗ, ‘ಇದು ಅಂತರ ರಾಜ್ಯ ವಾಹನವಾಗಿದ್ದು, ದಾಬಸ್ ಪೇಟೆ ಬಳಿ ನಿಲುಗಡೆ‌ ಇರುವುದಿಲ್ಲ , ತುಮಕೂರಿಗೆ  ಬೇಕಾದರೆ ತೆರಳಿ, ಅಲ್ಲಿಂದ ಬೇರೆ ವಾಹನದಲ್ಲಿ ಹೋಗಬಹುದು’ ಎಂದು ನಿರ್ವಾಹಕರು ತಿಳಿಸಿದ್ದರು. ಹೀಗಾಗಿ ತುಮಕೂರಿಗೆ ಟಿಕೇಟ್ ಪಡೆದ ಮಹಿಳೆ ತುಮಕೂರಿನಲ್ಲಿ  ಇಳಿಯದೆ, ಬಸ್ಸಿನೊಳಗೆ ಎಲ್ಲಾ ಪ್ರಯಾಣಿಕರ‌ ಮುಂದೆ ತನ್ನ  ಚಪ್ಪಲಿ ಹಿಡಿದು ನಾನು ಇಲ್ಲಿ ಇಳಿಯುವುದಿಲ್ಲ ನೀನು ದಾಬಸ್ ಪೇಟೆಗೆ ಹೋಗಬೇಕು. ಅಲ್ಲಿಯೇ ನಾನು‌ ಇಳಿಯುವುದು ‌ಎಂದು  ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಮಹಿಳೆ ಎಂಬ ಕಾರಣದಿಂದ ನಿರ್ವಾಹಕರು ಏನೂ ಮಾತನಾಡದೇ, ಹತ್ತಿರಕ್ಕೂ ಹೋಗದೆ , ನಿಲುಗಡೆ ಇಲ್ಲದಿದ್ದರೂ ಸಹ ದಾಬಸ್‌ಪೇಟೆಯ  ಫ್ಲೈ ಓವರ್ ಬಳಿ, ಚಾಲಕರಿಗೆ ತಿಳಿಸಿ ನಿಲುಗಡೆ ನೀಡಿ ಮಹಿಳೆಯನ್ನು ಇಳಿಸಿರುತ್ತಾರೆ ಎಂದು ನಿಗಮ ತನ್ನ ದೂರಿನಲ್ಲಿ ತಿಳಿಸಿದೆ.

ಈ ಸಂಬಂಧ ಹಲ್ಲೆ ಮಾಡಿದ   ವ್ಯಕ್ತಿಗಳ ಮೇಲೆ  ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ  ನಿಗಮದ ವತಿಯಿಂದ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ನಿಗಮದ ಚಾಲನಾ ಸಿಬ್ಬಂದಿ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಹಾಗೂ ಪ್ರಯಾಣಿಕರು ಸಹ ಚಾಲನಾ ಸಿಬ್ಬಂದಿಗಳೊಂದಿಗೆ  ಸಹಕರಿಸಲು ನಿಗಮ ಕೋರಿದೆ.

Similar News