'ಗ್ಯಾರಂಟಿ' ಈಡೇರಿಸದಿದ್ದರೆ ಅಧಿವೇಶನ ಮುಗಿಯುವವರೆಗೂ ಸತ್ಯಾಗ್ರಹ: ಬಿ.ಎಸ್.ಯಡಿಯೂರಪ್ಪ

''ವಿಧಾನಸೌಧದ ಒಳಗೆ, ಹೊರಗೆ ನಮ್ಮ ಹೋರಾಟ ನಿಶ್ಚಿತ''

Update: 2023-06-22 14:55 GMT

ದಾವಣಗೆರೆ, ಜೂ.22: ಐದೂ ಗ್ಯಾರಂಟಿ ಭರವಸೆಗಳನ್ನು ಯಾವುದೇ ಷರತ್ತಿಲ್ಲದೇ ಜಾರಿಗೊಳಿಸಲು ಒತ್ತಾಯಿಸಿ ಜು.4ರಂದು ರಾಜ್ಯಪಾಲರ ಭಾಷಣ ಮುಗಿದ ನಂತರ ವಿಧಾನಸೌಧ ಆವರಣದ ಬಳಿಯ ಗಾಂಧಿ ಪುತ್ಥಳಿ ಬಳಿ ಅಧಿವೇಶನ ಮುಗಿಯುವವರೆಗೂ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿನ ರೇಣುಕಾ ಮಂದಿರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದೂ ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು, ತಿಂಗಳಾದರೂ ಈಡೇರಿಸಿಲ್ಲ. ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಂತೆ ಜು.5ರಿಂದಲೇ ವಿಧಾನಸೌಧ ಗಾಂಧಿ ಪುತ್ಥಳಿ ಬಳಿ ಹೋರಾಟ ಆರಂಭಿಸಲಿದ್ದೇನೆ ಎಂದರು.

ನಾನೇ ಖುದ್ದಾಗಿ ಧರಣಿ ಸತ್ಯಾಗ್ರಹ ನಡೆಸುವೆ. ವಿಧಾನಸಭೆ, ವಿಧಾನ ಪರಿಷತ್‍ನಲ್ಲೂ ನಮ್ಮ ಶಾಸಕರು ಹೋರಾಟ ನಡೆಸುವರು. ಅಧಿವೇಶನದಲ್ಲಿ ಬಿಜೆಪಿ ಶಾಸಕರು ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಿದರೆ, ಸದನದ ಹೊರಗೆ ಗಾಂಧಿ ಪುತ್ಥಳಿ ಬಳಿ ನಾನೂ ಸೇರಿದಂತೆ ಬಿಜೆಪಿಯ ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರು ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಯಾವುದೇ ಷರತ್ತು ವಿಧಿಸದೇ, ಜಾರಿಗೊಳಿಸಬೇಕು.  ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಈಡೇರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದ ಒಳಗೆ, ಹೊರಗೆ ನಮ್ಮ ಹೋರಾಟ ನಿಶ್ಚಿತ ಎಂದು ಹೇಳಿದರು.

ಅಕ್ಕಿ ಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋಗಿ, ಶಕ್ತಿ ಯೋಜನೆ ಹಾಗೂ ಪದವೀಧರರಿಗೆ 3 ಸಾವಿರ ರು., ಡಿಪ್ಲೊಮಾ ಪದವೀಧರರಿಗೆ ವಿದ್ಯಾನಿಧಿ ನೀಡುವುದಾಗಿ ಸ್ವತಃ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸಹಿ ಮಾಡಿ, ಗ್ಯಾರಂಟಿ ಕಾರ್ಡ್‍ಗಳಲ್ಲಿ ರಾಜ್ಯದಲ್ಲಿ ಹಂಚಿ, ಆಶ್ವಾಸನೆ ನೀಡಿದ್ದರು. ಮನೆ ಮನೆಗಳ ಬಾಗಿಲಿಗೆ ಹೋಗಿ, ಗ್ಯಾರಂಟಿ ಕಾರ್ಡ್ ನೀಡಿದ್ದರು. ಈ ಪೈಕಿ ಶಕ್ತಿ ಯೋಜನೆ ಮಾತ್ರ ಜಾರಿಗೊಳಿಸಿದ್ದು, ಅದಕ್ಕೂ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತಿಲ್ಲದೇ ಜಾರಿಗೊಳಿಸಬೇಕು ಎಂದು ಅವರು ತಾಕೀತು ಮಾಡಿದರು.

ಸಿಎಂ ಸಿದ್ದರಾಮಯ್ಯ ಈಗ ರಾಜ್ಯದ ಜನರಿಗೆ ಅಕ್ಕಿ ನೀಡುವ ಬದಲಿಗೆ ವಿನಾಕಾರಣ ಸಬೂಬು ಹೇಳುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಅಕ್ಷಮ್ಯ ಅಪರಾಧ. ಕೊಟ್ಟ ಭರವಸೆಗಳನ್ನು ನೀವು ಮೊದಲು ಈಡೇರಿಸಿ. ಅದನ್ನು ಬಿಟ್ಟು, ಕೇಂದ್ರದ ವಿರುದ್ಧ ವೃಥಾ ಆರೋಪ ಮಾಡಿ, ಕಾಲಹರಣ ಮಾಡುತ್ತಾ ಕೂರುವುದಲ್ಲ ಎಂದು ಕಿಡಿಕಾರಿದರು. 

ಈ ವೇಳೆ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಎಂ.ಪಿ.ರೇಣುಕಾಚಾರ್ಯ, ಸಂಸದ ಸಿದ್ಧೇಶ್ವರ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಹರಿಹರದ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಕೆ.ಎಸ್.ನವೀನ್, ಸುಧಾ ಜಯರುದ್ರೇಶ್, ಶಿವಕುಮಾರ್, ಪ್ರೊ.ಲಿಂಗಣ್ಣ, ರವಿಕುಮಾರ್, ಕೇಂದ್ರದ ಸಚಿವ ನಾರಾಯಣಸ್ವಾಮಿ, ಯಶವಂತರಾವ್ ಜಾಧವ್ ಇತರರು ಇದ್ದರು.

Similar News