ಬಾಗಲಕೋಟೆ: ಕರೆ ಮಾಡಿ ಪೊಲೀಸರನ್ನು ಯಾಮಾರಿಸುತ್ತಿದ್ದ ವಿಕಲಚೇತನ ವ್ಯಕ್ತಿ; ಕೇಸು ದಾಖಲು
ಬಾಗಲಕೋಟೆ: ಎಸಿಪಿ/ಡಿಸಿಪಿ ಎಂದು ಇನ್ಸ್ ಪೆಕ್ಟರ್, ಬೀಟ್ ಪೊಲೀಸರನ್ನು ಯಾಮಾರಿಸುತ್ತಿದ್ದ ವಿಕಲಚೇತನ ವ್ಯಕ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಈ ನಕಲಿ ಡಿಸಿಪಿಯನ್ನು ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದ ನಿವಾಸಿ ಅಪ್ಪು ಬಸಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಈತ ಪೊಲೀಸರಿಗೆ ಕರೆ ಮಾಡಿ, " ನೀವು ಸರಿಯಾಗಿ ಕರ್ತವ್ಯ ಮಾಡ್ತಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಅನೇಕ ಕಾನೂನುಬಾಹೀರ ದಂಧೆ ನಡೆಯುತ್ತಿವೆ. ನೀವು ನಿಯಂತ್ರಣ ಮಾಡುತ್ತಿಲ್ಲ. ನಿಮ್ಮ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಎಂದು ಇನ್ಸಪೆಕ್ಟರ್,ಬೀಟ್ ಪೊಲೀಸರಿಗೆ ಬೆದರಿಕೆ ಹಾಕುತ್ತಾ ಇಂತಿಷ್ಟು ಹಣ ಪೋನ್ ಪೇ ಮಾಡಿ ಎಂದು ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳ ರೀತಿಯ ನಂಬರ್ ನಿಂದ ಬನಹಟ್ಟಿ ಠಾಣೆಯ ವಿವಿಧ ಬೀಟ್ ಪೊಲೀಸರಿಗೂ ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದ್ದು, ಬನಹಟ್ಟಿ ಠಾಣೆಯಲ್ಲಿ ಈತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಜಮಖಂಡಿ, ಬೆಳಗಾವಿ,ಶಿವಮೊಗ್ಗದಲ್ಲೂ ಇದೇ ಮಾದರಿ ಕೃತ್ಯವೆಸಗಿರುವ ಅಪ್ಪು ಹಿರೇಮಠ ವಿರುದ್ಧ ಕೇಸ್ ಆಗಿವೆ. ಇದೀಗ ಅಪ್ಪು ಹಿರೇಮಠನನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಕಲಚೇತನ ಎಂಬ ಅನುಕಂಪದಲ್ಲಿ ಆತನಿಗೆ ನೊಟೀಸ್ ಕೊಟ್ಟು ಕಳಿಸಿದ್ದಾರೆ