ಬಸವಣ್ಣನವರ ಕುರಿತು ವಿವಾದಾತ್ಮಕ ಹೇಳಿಕೆ; ವ್ಯಾಪಕ ಆಕ್ರೋಶದ ಬಳಿಕ ಸ್ಪಷ್ಟನೆ ನೀಡಿದ ಯತ್ನಾಳ್
ಬಾಗಲಕೋಟೆ: ಬಸವಣ್ಣನವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಹೇಳಿಕೆ ಕುರಿತು ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ಬಸವಣ್ಣನವರಿಗೆ ಕೊನೆಗೆ ಏನಾಗಿತ್ತು ಎನ್ನುವ ಸತ್ಯ ನಮಗೆ ಗೊತ್ತಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನರಿಗೆ ಸಾವಿರಾರು ವರ್ಷದಿಂದ ನಮ್ಮ ಹಿರಿಯರು ಈ ಸತ್ಯವನ್ನು ಹೇಳುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲೆಯ ಬನಹಟ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ ವೀರಶೈವ ಮಹಾಸಭಾದ ವಿರುದ್ಧವೂ ಹರಿಹಾಯ್ದಿದ್ದಾರೆ.
ನಾವು ಬಸವಣ್ಣನವರ ವಿಚಾರ ಒಪ್ಪಿಕೊಂಡವರು, ಬಸವಣ್ಣನವರನ್ನು ನಂಬಿದವರು. ಹೃದಯದಲ್ಲಿ ಒಳ್ಳೆಯದಾಗಲಿ ಅಂತ ಬೇಡಿಕೊಳ್ಳುವವರು. ದೇಶಕ್ಕೆ ಒಳ್ಳೆಯದಾಗೋದಾದರೆ ಹೋಮ, ಹವನ ಕೂಡ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಮಹಾಸಭಾದವರು ಏನು ಮಾಡಿದ್ದಾರೆ. ಮೊದಲು ಶಿವಾನುಭವ ಮಂಟಪದ ಬಗ್ಗೆ ಹೋರಾಟ ಮಾಡಿ ಅಂತ ಹೇಳಿ. ಆದರೆ, ಈ ಬಗ್ಗೆ ಒಬ್ಬರೂ ಮಾತಾಡಲ್ಲ. ಅಖಿಲಭಾರತ ವೀರಶೈವ ಮಹಾ ಸಭಾದಲ್ಲಿ ಈಶ್ವರ ಖಂಡ್ರೆ ಏನು ಮಾಡುತ್ತಿದ್ದಾರೆ. ವೀರಶೈವ ಮಹಾಸಭಾ ಕೇವಲ ಮೂರು ಕುಟುಂಬಕ್ಕೆ ಸೇರಿದಂತಿದೆ. ಎಲ್ಲ ಡೋಂಗಿ ನಾಟಕ ಮಾಡುತ್ತಾ ಬಂದಿದ್ದಾರೆ. ಬಸವಣ್ಣನವರ ಇತಿಹಾಸ ಏನಿದೆ, ಗಾಂಧಿಜೀ ನಾ ಯಾರು ಹೊಡೆದರು. ಬಸವಣ್ಣನವರರನ್ನು ಯಾರು ಹೊಡೆದರು, ಅಂಬೇಡ್ಕರ್ಗೆ ಎಷ್ಟು ಅವಮಾನ ಮಾಡಿದರು ಎಂಬುವುದು ಚರ್ಚೆ ಇದೆ. ಚರ್ಚೆಗೆ ಬೇಕಾದರೆ ಬಾ ಅಂತ ಹೇಳಿ ಎಂದು ಸವಾಲು ಹಾಕಿದ್ದಾರೆ.