ಲೂಟಿಕೋರ ಕಾಂಗ್ರೆಸ್ಸಿಗರ ಕೈಯಲ್ಲಿ ದೇಶ ಕೊಡಲು ಸಾಧ್ಯವೇ? : ಪ್ರಧಾನಿ ಮೋದಿ
ಬಾಗಲಕೋಟೆ : ಕಾಂಗ್ರೆಸ್‍ನ ಇತಿಹಾಸ ದೇಶದ ಲೂಟಿ ಮಾಡುವುದೇ ಆಗಿದೆ. ಅಂತಹ ಪಕ್ಷದವರ ಕೈಯಲ್ಲಿ ದೇಶ ಕೊಡಲು ಸಾಧ್ಯವೇ? ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನರನ್ನು ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ಇಂದು ಬೆಳಿಗ್ಗೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. "ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನೂ ತಮ್ಮ ಲೂಟಿಯ ಎಟಿಎಂ ಮಾಡಿದೆ. ಇಷ್ಟು ಕಡಿಮೆ ಸಮಯದಲ್ಲೇ ಕರ್ನಾಟಕದ ಸರಕಾರದ ಖಜಾನೆ ಖಾಲಿಯಾಗಿದೆ. ರಾಜ್ಯ ಸರಕಾರಿ ನೌಕರರಿಗೆ ವೇತನ ಕೊಡಲೂ ಸಾಧ್ಯವಾಗದ ಸ್ಥಿತಿ ಬರಲಿದೆ. ನಿಮ್ಮ ಮಕ್ಕಳೂ ಹಸಿವಿನಿಂದ ಒದ್ದಾಡುವ ಸ್ಥಿತಿ ಬಂದೀತು" ಎಂದು ಎಚ್ಚರಿಸಿದರು.
ನಮ್ಮ ಸರಕಾರವು ಕರ್ನಾಟಕದಲ್ಲಿ ವಿಜಯಪುರ ಸೇರಿ ಹಲವಾರು ವಿಮಾನ ನಿಲ್ದಾಣ ನಿರ್ಮಿಸುತ್ತಿದೆ. ಬಾಗಲಕೋಟೆಯಲ್ಲಿ ಆಧುನಿಕ ರೈಲು ನಿಲ್ದಾಣ ಬರಲಿದೆ. ರಾಷ್ಟ್ರೀಯ ಹೆದ್ದಾರಿ ಕೂಡ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಮೋದಿಯು ಮೂಲಸೌಕರ್ಯಕ್ಕೆ ಒತ್ತು ಕೊಟ್ಟಿದ್ದಾರೆ. ವಂಚಿತ ವರ್ಗಕ್ಕೆ ನಾವು ಆದ್ಯತೆ ಕೊಟ್ಟಿದ್ದೇವೆ. ನಾನು ಅಧಿಕಾರಕ್ಕೆ ಬರುವ ಮೊದಲೇ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ವಿವರಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಜಲಜೀವನ್ ಮಿಷನ್ ಅನುಷ್ಠಾನ ಮಾಡಿದ್ದು, ಶೇ 75ಕ್ಕೂ ಹೆಚ್ಚು (11 ಕೋಟಿ ಮನೆ) ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕೊಟ್ಟಿದ್ದೇವೆ. ಹಿಂದೆ ಅದು ಕೇವಲ ಶೇ 16ರಷ್ಟಿತ್ತು. ಇದನ್ನು ಇವರು ಯಾಕೆ ಮಾಡಿಲ್ಲ ಎಂದು ಕೇಳಿದರು. ಕಾಂಗ್ರೆಸ್ಸಿಗೆ ಬಡವರ, ದಲಿತರ, ವಂಚಿತರ ಕಡೆ ಗಮನ ಕೊಡಲು ಪುರುಸೊತ್ತಿಲ್ಲ ಎಂದು ಟೀಕಿಸಿದರು.
ಬೆಂಗಳೂರನ್ನು ಟ್ಯಾಂಕರ್ ಹಬ್ ಮಾಡಿದ ಕಾಂಗ್ರೆಸ್
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ವಸೂಲಿ ಗ್ಯಾಂಗ್ ನಡೆಸುತ್ತಿದೆ. ಭ್ರಷ್ಟಾಚಾರದ ಮೂಲಕ ವಸೂಲಿ ಮಾಡುವುದೇ ಇವರ ದಂಧೆ. ಬೆಂಗಳೂರು ಟೆಕ್ ಹಬ್ ಎಂದೇ ಗುರುತಿಸಿಕೊಂಡಿದೆ. ಇದನ್ನು ಟ್ಯಾಂಕರ್ ಹಬ್ ಮಾಡಿದ್ದಾರೆ. ನೀರಿಗಾಗಿ ಟ್ಯಾಂಕರ್ ಮಾಫಿಯದ ಮೂಲಕ ಕಾಂಗ್ರೆಸ್ ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ಸಿಗರು 2ಜಿ ಹಗರಣದಂತಹ ಭ್ರಷ್ಟಾಚಾರದ ದೊಡ್ಡ ಹಗರಣ ಮಾಡಲು ಕಾಯುತ್ತಿದ್ದಾರೆ. ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಮೋದಿಯವರು ಮನವಿ ಮಾಡಿದರು.
ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಒಬಿಸಿ ಮೀಸಲಾತಿಯಡಿ ಅವಕಾಶ ಕೊಟ್ಟಿದ್ದಾರೆ. ದಲಿತರನ್ನು ವಂಚಿಸುವ ಹುನ್ನಾರವಿದು. ಧರ್ಮದ ಆಧಾರದಲ್ಲಿ ತಮ್ಮ ಮತಬ್ಯಾಂಕ್ ರಕ್ಷಿಸಲು ಇವರು ಮುಂದಾಗಿದ್ದಾರೆ. ಎಸ್‍ಸಿ, ಎಸ್‍ಟಿ, ಒಬಿಸಿ ಸಂಸದರು ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನ ಇಂತಹ ಹುನ್ನಾರ ಅನುಷ್ಠಾನಕ್ಕೆ ಮೋದಿ ಅವಕಾಶ ಕೊಡುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.
ಹುಬ್ಬಳ್ಳಿಯ ಘಟನೆ ಆತಂಕಕಾರಿ
ಹುಬ್ಬಳ್ಳಿಯ ಘಟನೆ ಆತಂಕಕಾರಿ. ನಮ್ಮ ಮಗಳಂಥ ಯುವತಿಯ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದ ಅವರು, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಮತಬ್ಯಾಂಕಿಗಾಗಿ, ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಅದನ್ನು ಪ್ರಮುಖ ವಿಚಾರವಾಗಿ ಪರಿಗಣಿಸಿಲ್ಲ. ಹನುಮಾನ್ ಚಾಲೀಸವನ್ನು ಕೇಳುವ ಅಂಗಡಿ ಮಾಲೀಕನ ಮೇಲೆ ಹಲ್ಲೆ ಆಗುತ್ತದೆ. ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದರೆ ಸಿಲಿಂಡರ್ ಸ್ಫೋಟ ಎಂದು ಸರಕಾರದ ಪ್ರತಿನಿಧಿ ಹೇಳುತ್ತಾರೆ. ಇವೆಲ್ಲವೂ ಆತಂಕವಾದ, ಭಯೋತ್ಪಾದನೆಯ ಮಾನಸಿಕವಾದದ ಪ್ರತಿಬಿಂಬ. ಕಾಂಗ್ರೆಸ್ ಪಕ್ಷ ಮತಕ್ಕಾಗಿ ಇಂಥವರನ್ನು ಬೆಂಬಲಿಸುತ್ತದೆ ಎಂದು ಮೋದಿಯವರು ಟೀಕಿಸಿದರು.
ದೇಶದ ನಿರ್ದೋಷಿ ನಾಗರಿಕರನ್ನು ಕೊಲ್ಲಲು ಬಯಸುವವರನ್ನು ಸುಮ್ಮನೆ ಬಿಡುವುದಿಲ್ಲ. ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕಾಗಿ ಮತ ಕೊಡಿ. ಪಿ.ಸಿ.ಗದ್ದಿಗೌಡರ್, ರಮೇಶ್ ಜಿಗಜಿಣಗಿ ಅವರನ್ನು ಗರಿಷ್ಠ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕೇಂದ್ರದ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಅವರ ನಿಧನ ದುಃಖದ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು. ನೈಜ ಜನಸೇವಕರೊಬ್ಬರನ್ನು ನಾವು ಕಳಕೊಂಡಿದ್ದೇವೆ ಎಂದು ನುಡಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿಗಳಾದ ರಮೇಶ್ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ್, ಮಾಜಿ ಸಚಿವರು, ಶಾಸಕರು, ಪಕ್ಷದ ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರು.