ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ನಿಮ್ಮ ಧ್ವನಿ ಆಗಿರುತ್ತಾರೆ: ಸಿಎಂ ಸಿದ್ದರಾಮಯ್ಯ

Update: 2024-04-27 15:59 GMT

Photo : x/@siddaramaiah

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನೀವು ಬಿಜೆಪಿಯ ಗದ್ದಿಗೌಡರನ್ನು ಸೋಲಿಸಲೇ ಬೇಕು. ಕಾಂಗ್ರೆಸ್ಸಿನ ಸಂಯುಕ್ತ ಪಾಟೀಲ್ ಸಂಸತ್ತಿನಲ್ಲಿ ನಿಮ್ಮ ಧ್ವನಿ ಆಗಿರುತ್ತಾರೆ. ಆದುದರಿಂದ, ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು.

ಶನಿವಾರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗದ್ದಿಗೌಡರ್ ಅವರು ಇಷ್ಟು ವರ್ಷ ನೀವು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೆ ಬಿಟ್ಟಿಲ್ಲ ಎಂದು ಟೀಕಿಸಿದರು.

ರಾಜ್ಯಕ್ಕೆ ಬರ ಬಂದಾಗಲೂ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗಲೂ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ, ಜಿಲ್ಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಂದ ಮತಗಳಿಗೆ ನೀವು ಮಾಡಿದ ಅವಮಾನ ಅಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

20 ವರ್ಷ ನಿಮ್ಮ ಪರವಾಗಿ ಒಂದೂ ಮಾತಾಡದ ಗದ್ದಿಗೌಡರನ್ನು ಮನೆಗೆ ಕಳುಹಿಸಿ. ಅವರು ಸ್ವಲ್ಪ ವಿಶ್ರಾಂತಿ ಪಡೆಯಲಿ. ಈ ಬಾರಿ ಸಂಯುಕ್ತ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ. ಸಂಯುಕ್ತ ಸಂಸತ್ತಿನಲ್ಲಿ ಬಾಗಲಕೋಟೆ ಹಾಗೂ ರಾಜ್ಯದ ಜನರ ಧ್ವನಿ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮೋದಿಯ ಸುಳ್ಳಿನ ಮಾಲೆ: ರಾಜ್ಯಕ್ಕೆ ಭೀಕರ ಬಿಸಿಲು ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ದಿಲ್ಲಿಗೆ ಬಂದು ಪ್ರತಿಭಟನೆ ಮಾಡಿದ್ವಿ. ಆದ್ರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ ಮೋದಿಯವರೇ?. ಇಂಥಾ ದ್ರೋಹ ಏಕೆ ಮಾಡಿದ್ರಿ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಮೋದಿಯವರೇ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದ್ರು. ಪ್ರತಿಭಟನೆ ಮಾಡಿ ನೂರಾರು ರೈತರು ಮೃತಪಟ್ಟರೂ ಈ ರೈತರ ಸಾವಿನ ಬಗ್ಗೆ ನಿಮಗೆ ಸಣ್ಣ ಕರುಣೆಯೂ ಬರಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆ ಮಾಡುತ್ತೇವೆ ಎಂದ್ರು. ಆದರೆ ಈಗ ಡಾಲರ್ ಎದುರು ರೂಪಾಯಿ ಮೌಲ್ಯ ಯಾವ ಮಟ್ಟಕ್ಕೆ ಏರಿಕೆ ಆಗಿದೆ ನೋಡಿ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ್ರು. ಕೆಲಸ ಕೇಳಿದ್ರೆ ಪಕೋಡ ಮಾರಾಟ ಮಾಡಿ ಅಂದ್ರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಲೆ ಏರಿಕೆಗೆ ತಡೆ ಹಾಕುತ್ತೇವೆ ಎಂದು ಭಾರತೀಯರನ್ನು ನಂಬಿಸಿ ಮೋಸ ಮಾಡಿದ್ದೀರಿ, ಡೀಸೆಲ್, ಪೆಟ್ರೋಲ್, ಗೊಬ್ಬರ, ಗ್ಯಾಸ್ ಬೆಲೆ ಗಗನಕ್ಕೆ ಏರಿಸಿದ್ರಲ್ಲಾ ಸ್ವಾಮಿ. ಇಂಥಾ ನಂಬಿಕೆ ದ್ರೋಹನಾ ಸ್ವಾಮಿ ಮಾಡೋದು? ನಾವು ದುಡ್ಡು ಕೊಡ್ತೀವಿ ಅಂದ್ರೂ ರಾಜ್ಯದ ಜನರಿಗೆ ಅಕ್ಕಿ ಕೊಡಲಿಲ್ಲವಲ್ಲಾ? ಇದು ನನ್ನ ಜನರ ಹೊಟ್ಟೆ ಮೇಲೆ ಹೊಡೆದ ಹಾಗಲ್ವಾ ಮಿಸ್ಟರ್ ಮೋದಿ ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಡೀ ದೇಶದ ರೈತರ ಸಾಲ ಮನ್ನಾ ಆಗುತ್ತದೆ. ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದೂ ಕಾಲು ಲಕ್ಷ ರೂಪಾಯಿ ಖಾತೆಗೆ ಬಂದು ಬೀಳುತ್ತೆ. ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತ ಎಂದು ಅವರು ಹೇಳಿದರು.

ಈ ರೀತಿಯ 25 ಗ್ಯಾರಂಟಿಗಳು ಜಾರಿಯಾಗಲಿದ್ದು, ಈ ಗ್ಯಾರಂಟಿ ಪತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಹಿ ಹಾಕಿದ್ದಾರೆ. ಎಲ್ಲ ಗ್ಯಾರಂಟಿಗಳ ಲಕ್ಷ ರೂ. ಹಣ ಮಧ್ಯವರ್ತಿಗಳ ಹಾವಳಿ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಬಂದು ಬೀಳುತ್ತದೆ. ನೇಕಾರರ ಸಾಲ ಮನ್ನಾ ಮಾಡಿದೆ, ಮಗ್ಗಗಳಿಗೆ ಉಚಿತ ವಿದ್ಯುತ್ ಕೊಟ್ಟೆ. ಇನ್ನೂ ಹಲವು ಅನುಕೂಲ ನೇಕಾರರಿಗೆ ಮಾಡಿದ್ದು ನಾವೇ. ಬಿಜೆಪಿಯವರು ಏನೇನೂ ಮಾಡಲಿಲ್ಲ ಎಂದು ಅವರು ಟೀಕಿಸಿದರು.

ನಾವು ಕೆಲಸ ಮಾಡಿದ್ದೇವೆ. ನಮಗೆ ಕೂಲಿ ಕೊಡಿ. ದಯಮಾಡಿ ಸಂಯುಕ್ತ ಪಾಟೀಲ್ ಗೆಲ್ಲಿಸಿ. ಇವರು ನಿಮ್ಮ ಧ್ವನಿಯಾಗಿ ದಿಲ್ಲಿಯಲ್ಲಿ ಘರ್ಜಿಸುತ್ತಾರೆ ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್.ಬಿ.ತಿಮ್ಮಾಪುರ್, ಶಿವಾನಂದ ಪಾಟೀಲ್, ಮಾಜಿ ಸಚಿವ ಎಸ್.ಆರ್.ಪಾಟೀಲ್, ಶಾಸಕರಾದ ಲಕ್ಷ್ಮಣ ಸವದಿ, ವಿನಯ್ ಕುಲಕರ್ಣಿ, ಉಮಾಶ್ರೀ, ವಿಜಯಾನಂದ ಕಾಶಪ್ಪನವರ್, ಜೆ.ಟಿ.ಪಾಟೀಲ್, ಸುನಿತಾ ಪಾಟೀಲ್, ಅಜಯ್ ಕುಮಾರ್ ಸರ್ ನಾಯಕ, ರಾಜು ಚಿಮ್ಮನಕಟ್ಟಿ, ಬಿ.ಆರ್.ಯಾವಗಲ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News