ಚುನಾವಣಾ ಕಣದಲ್ಲಿ ಇರೋದು ಖಚಿತ : ವೀಣಾ ಕಾಶಪ್ಪನವರ್

Update: 2024-03-25 17:18 GMT

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆಯ ಟಿಕೆಟ್‍ಗೆ ಸಂಬಂಧಿಸಿದಂತೆ ಮಾ.28ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲೆಯ ಶಾಸಕರ ಸಭೆ ನಡೆಯಲಿದ್ದು, ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಆಯೋಜಿಸಲಾಗಿದ್ದ ತಮ್ಮ ಬೆಂಬಲಿಗರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಏನೇ ನಿರ್ಣಯವಾದರೂ ಚುನಾವಣಾ ಕಣದಲ್ಲಿ ಇರೋದು ಮಾತ್ರ ಖಚಿತ ಎಂದರು.

ಪಕ್ಷೇತರವಾಗಿ ನಿಂತರೂ ನನ್ನ ಪರವಾಗಿ ಕೆಲಸ ಮಾಡುವುದಾಗಿ ನಮ್ಮ ಕಾರ್ಯಕರ್ತರು ಭರವಸೆ ನೀಡಿದ್ದಾರೆ. ಲೋಕಸಭೆ ಚುನಾವಣೆಯ ಟಿಕೆಟ್ ಸಿಗಲಿಲ್ಲ ಎಂದು ನಾನು ಕೈ ಕಟ್ಟಿ ಕೂತಿಲ್ಲ. ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದೇನೆ ಎಂದು ಅವರು ಹೇಳಿದರು.

ಪಕ್ಷೇತರ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿದರೆ ನನ್ನ ಪರವಾಗಿ ಕೆಲಸ ಮಾಡದಂತೆ ಕಾರ್ಯಕರ್ತರಿಗೆ ನೋಟಿಸ್ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯಕರ್ತರಿಗೆ ಯಾವುದೆ ತೊಂದರೆ ಆಗದಂತೆ ಕಾಂಗ್ರೆಸ್ ಶಾಸಕರನ್ನು ಹೊರಗಿಟ್ಟು ಚುನಾವಣೆ ಎದುರಿಸುವುದು ನಮಗೆ ಗೊತ್ತಿದೆ ಎಂದು ವೀಣಾ ಕಾಶಪ್ಪನವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News