ಜನರಿಂದ ಹಣ ವಸೂಲಿ ಆರೋಪ: ಎಎಸ್‍ಐ ಸೇರಿ ಇಬ್ಬರು ಅಮಾನತು

Update: 2024-05-22 17:36 GMT

ಬೆಂಗಳೂರು: ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪದಡಿ ಇಲ್ಲಿನ ರಾಜಗೋಪಾಲನಗರ ಠಾಣೆಯ ಎಎಸ್‍ಐ ಸೇರಿ ಇಬ್ಬರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಎಎಸ್‍ಐ ರಾಮಲಿಂಗಯ್ಯ ಹಾಗೂ ಹೆಡ್ ಕಾನ್‍ಸ್ಟೇಬಲ್ ಪ್ರಸನ್ನ ಕುಮಾರ್ ಅಮಾನತುಗೊಂಡವರು. ಮೇ 20ರ ರಾತ್ರಿ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಯ್ಸಳ ಸಿಬ್ಬಂದಿ ಗಸ್ತಿನಲ್ಲಿರುವಾಗ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಅದನ್ನು ಗಮನಿಸಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಪೊಲೀಸರನ್ನು ಕಂಡು ‘ಕಳ್ಳ.. ಕಳ್ಳ.. ಪೊಲೀಸ್ ಕಳ್ಳ' ಎಂದು ಕೂಗಿಕೊಂಡಿದ್ದರು. ಕೂಗಾಟ ಕೇಳುತ್ತಿದ್ದಂತೆ ಹೊಯ್ಸಳ ಸಿಬ್ಬಂದಿ ವಾಹನ ಸಮೇತ ಸ್ಥಳದಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು. ಮೊಬೈಲ್‍ನಲ್ಲಿ ಸೆರೆಹಿಡಿದಿದ್ದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಬಳಿಕ ಪೊಲೀಸ್ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಈ ಘಟನೆ ಸಂಬಂಧ ಮಾಹಿತಿ ಅರಿತು ತನಿಖೆ ನಡೆಸಿ ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್ ನೀಡಿದ ವರದಿ ಆಧರಿಸಿ, ನಗರ ಪೊಲೀಸ್ ಆಯುಕ್ತರು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News