30 ಅಧಿನಿಯಮಗಳನ್ನು ನಿರಸನಗೊಳಿಸಿದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

Update: 2024-02-21 15:00 GMT

ಬೆಂಗಳೂರು : ಮೂವತ್ತು ಪ್ರಾದೇಶಿಕ ಮತ್ತು ರಾಜ್ಯ ಅಧಿನಿಯಮಗಳನ್ನು ನಿರಸನಗೊಳಿಸಲು ಬುಧವಾರ ವಿಧಾನಸಭೆಯಲ್ಲಿ ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ-2024ಕ್ಕೆ ಅಂಗೀಕಾರ ಲಭಿಸಿತು.

ಕರ್ನಾಟಕ ಕಾನೂನು ಆಯೋಗವು ವಿವಿಧ ಅಧಿನಿಯಮಗಳನ್ನು ಸವಿವರವಾಗಿ ಪರಿಶೀಲಿಸಿ, ತನ್ನ 58ನೇ ವರದಿಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಮತ್ತು ಸನ್ನಿವೇಶಗಳಲ್ಲಿ ಬಳಕೆಯಲ್ಲಿಲ್ಲವೆಂದು ಅಥವಾ ಸುಸಂಗತವಲ್ಲವೆಂದು ಕಂಡು ಬಂದ 30 ಪ್ರಾದೇಶಿಕ ಮತ್ತು ರಾಜ್ಯ ಅಧಿನಿಯಮಗಳನ್ನು ನಿರಸನಗೊಳಿಸಲು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸದನಕ್ಕೆ ವಿವರಣೆ ನೀಡಿದರು.

ನಿರಸನವಾದ ಅಧಿನಿಯಮಗಳು: ಸ್ಟೇಟ್ ಬ್ಯಾಂಕ್ ಅಧಿನಿಯಮ 1350ಎಫ್, ವಿಸರ್ಜಿತ ವಿಶೇಷ ನ್ಯಾಯಾಧೀಕರಣ(ವಾರೆಂಟುಗಳ ಹೊರಡಿಸುವಿಕೆ)ವಿನಿಯಮಗಳು 1359ಎಫ್, ಜಹಗೀರುಗಳ ರದ್ದಿಯಾತಿ ವಿನಿಯಮಗಳು 1958ಎಫ್, ಪಿಂಚಣಿ ಅಧಿನಿಯಮ-1871, ಟ್ರಾಮ್ ಮಾರ್ಗಗಳ ಅಧಿನಿಯಮ-1906, ಮರು ಮಖ್ಖಾತೆಯಂ ಅಧಿನಿಯಮ-1932, ಹಿಂದೂ ಕಾನೂನುಗಳ ಮಹಿಳೆಯರ ಹಕ್ಕುಗಳ ಅಧಿನಿಯಮ-1933, ನಂಬೂದರಿ ಅಧಿನಿಯಮ-1932, ಬಾಂಬೆ ತಾತ್ಕಾಲಿಕ ತೆರಿಗೆಗಳ ಸಂಗ್ರಹಣೆ ಅಧಿನಿಯಮ-1938.

ಸ್ವತ್ತುಗಳ ವರ್ಗಾವಣೆ ಮತ್ತು ಭಾರತೀಯ ನೋಂದಣಿ(ಬಾಂಬೆ ತಿದ್ದುಪಡಿ) ಅಧಿನಿಯಮ-1939, ಕುಚ್ಚಿ ಮೆಮನ್‍ಗಳ ಅಧಿನಿಯಮ-1943, ದೇವಾಲಯ ಪ್ರವೇಶ ಅಧಿಕೃತಗೊಳಿಸುವಿಕೆ ಅಧಿನಿಯಮ-1947, ಕಿರುಕುಳಕಾರಿ ವ್ಯಾಜ್ಯ ಅಧಿನಿಯಮ-1949, ಔಷಧ(ನಿಯಂತ್ರಣ) ಅಧಿನಿಯಮ-1949, ಔಷಧ(ನಿಯಂತ್ರಣ) ಅಧಿನಿಯಮ-1950, ಮೈಸೂರು ಸ್ವತ್ತುಗಳ ವರ್ಗಾವಣೆ(ಕೃಷಿ ಭೂಮಿಯ ವಿಸ್ತರಣೆ) ಅಧಿನಿಯಮ-1951, ಅತಿಯತ್ ವಿಚಾರಣೆಗಳ ಅಧಿನಿಯಮ-1952.

ಔಷಧ (ನಿಯಂತ್ರಣ) ಅಧಿನಿಯಮ-1952, ಹಿಂದೂ ಸಾರ್ವಜನಿಕ ಸ್ಥಳಗಳ ಪೂಜೆ(ಅಧಿಕೃತ ಪ್ರವೇಶ) ಅಧಿನಿಯಮ-1956, ಮರು ಮಖ್ಖಾತೆಯಂ(ತೊಂದರೆಗಳ ನಿವಾರಣೆ) ಅಧಿನಿಯಮ-1955, ಕರ್ನಾಟಕ ಅಸ್ತಿತ್ವದಲ್ಲಿರುವ ಕಾನೂನುಗಳು(ಮೌಲ್ಯಗಳ ಉಲ್ಲೇಖನಗಳ ನಿರ್ಮಾಣ)ಅಧಿನಿಯಮ 1957, ಕರ್ನಾಟಕ ನಿರ್ವಾಸಿತ ಹಿತಾಸಕ್ತಿ(ಪ್ರತ್ಯೇಕಿಸುವ)ಪೂರಕ ಅಧಿನಿಯಮ-1961.

ಕರ್ನಾಟಕ ನಗದು ಅನುದಾನಗಳ ರದ್ದಿಯಾತಿ ಅಧಿನಿಯಮ-1967, ಕರ್ನಾಟಕ ಕೃಷಿ ಪತ್ತಿನ ಪಾಸು ಪುಸ್ತಕ ಅಧಿನಿಯಮ-1984, ಕರ್ನಾಟಕ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸುಗಳ ಅಭ್ಯರ್ಥಿಗಳ ಆಯ್ಕೆ(ವಿಶೇಷ ಉಪಬಂಧಗಳ) ಅಧಿನಿಯಮ-2004 ಹಾಗೂ 2007, 2011, 2012, 2013 ಹಾಗೂ 2014ನೆ ಸಾಲಿನ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ(ಪ್ರವೇಶಾತಿ ವಿನಿಯಮನ ಮತ್ತು ಶುಲ್ಕ ನಿಗದಿಕರಣ)(ವಿಶೇಷ ಉಪಬಂಧಗಳ) ಅಧಿನಿಯಮವನ್ನು ನಿರಸನಗೊಳಿಸಲು ಈ ವಿಧೇಯಕ ಜಾರಿಗೆ ತರಲಾಗಿದೆ.

ವಿಧೇಯಕ ವಾಪಸ್: 2015ನೇ ಸಾಲಿನ ಕರ್ನಾಟಕ ಕುಲಾಂತರಿ ಮತ್ತು ತಳಿ ವಿಜ್ಞಾನದ ಪ್ರಕಾರ ಮಾರ್ಪಾಟಾದ ಹತ್ತಿ ಬೀಜಗಳ(ಮಾರಾಟ ಬೆಲೆಯ ನಿಗದಿ ಮತ್ತು ಪರಿಹಾರದ ಸಂದಾಯ) ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಹಿಂಪಡೆಯಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News