‘ಅಸ್ಮಿತೆ’ ವಸ್ತು ಪ್ರದರ್ಶನ ಮೇಳ ಉದ್ಘಾಟಿಸಿದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್
ಬೆಂಗಳೂರು: ಕರ್ನಾಟಕ ರಾಜ್ಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ಸ್ವ-ಸಹಾಯ ಗುಂಪುಗಳ ಕರಕುಶಲ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ‘ಅಸ್ಮಿತೆ’ಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್ ಉದ್ಘಾಟಿಸಿದರು.
ಸೋಮವಾರ ಇಲ್ಲಿನ ಐಎಎಸ್ ಅಧಿಕಾರಿಗಳ ಅಸೋಸಿಯಷನ್ಸ್ ಸಭಾಂಗಣದಲ್ಲಿ ರಾಜ್ಯಾದ್ಯಂತ ಇರುವ ಮಹಿಳಾ ಸ್ವ ಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ. ಈ ಪ್ರದರ್ಶನ ಮೇಳದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ತಮ್ಮ ಆರ್ಥಿಕ ಸದೃಢತೆಗಾಗಿ ತಯಾರಿಸಲಾದ ಉತ್ಪನ್ನಗಳ ಮಾರಾಟವನ್ನು ಮಾಡಲಾಗುವುದು.
ಈ ಮೇಳದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 58 ಮಹಿಳಾ ಸ್ವಸಹಾಯ ಗುಂಪುಗಳು ಭಾಗವಹಿಸಿವೆ. ಬೀದರ್ ನ ರಾಜ್ ಬಿದ್ರಿ ಸ್ವಸಹಾಯ ಸಂಘದ ಬಿದ್ರಿ ಉತ್ಪನ್ನಗಳು, ಸಮೃದ್ಧಿ ಸಂಜೀವಿನಿ ಸ್ವಸಹಾಯ ಸಂಘದ ಟೆರಕೋಟ ಪ್ಲ್ಯಾಂಟ್, ಚನ್ನಪಟ್ಟಣದ ಶಾರದಾದೇವಿ ಸ್ವಸಹಾಯ ಸಂಘದ ಚನ್ನಪಟ್ಟಣ ಗೊಂಬೆಗಳು, ಮಹಾಲಕ್ಷ್ಮಿ ಸ್ವ-ಸಹಾಯ ಸಂಘದ ಟೆರಕೋಟ ವಸ್ತುಗಳು, ಪಾರ್ವತಿ ಪರಮೇಶ್ವರ ಸ್ವ-ಸಹಾಯ ಸಂಘದ ಇಳಕಲ್ ಸೀರೆಗಳು, ಬನಶಂಕರಿ ಸ್ವ-ಸಹಾಯ ಸಂಘದ ತಿಪಟೂರು ಸೀರೆಗಳು, ಶಾರದಾಂಭ ಸ್ವಸಹಾಯ ಸಂಘದ ಕೊಡೊಯಾಲ ಸೀರೆ, ಲಕ್ಷ್ಮೀ ಸ್ವಸಹಾಯ ಸಂಘದ ಮೊಳಕಾಲ್ಮೂರು ರೇಷ್ಮೆ ಸೀರೆ, ಮುತ್ಯಾಲಮ್ಮ ಸ್ವ-ಸಹಾಯ ಸಂಘದ ದೊಡ್ಡಬಳ್ಳಾಪುರ ಸೀರೆಗಳು ಪ್ರದರ್ಶನದಲ್ಲಿವೆ.
ಜ.22ರಿಂದ ಜ.24ರ ವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 10:30ರಿಂದ ರಾತ್ರಿ 9:30ರ ವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು, ಸಾರ್ವಜನಿಕರು ಮತ್ತು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಕೋರಿದೆ.