ಬೆಂಗಳೂರು | ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ : ವಿದೇಶಿ ಪ್ರಜೆ ಬಂಧನ, 1.50 ಕೋಟಿ ರೂ.ಡ್ರಗ್ಸ್ ಜಪ್ತಿ

Update: 2024-10-25 12:48 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಮಾದಕವಸ್ತು ಮಾರಾಟ ಸರಬರಾಜು ಸೇವನೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿ ಬರೋಬ್ಬರಿ 1.50 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟೆಲ್ ಅನ್ನು ಜಪ್ತಿ ಮಾಡಿದ್ದಾರೆ.

ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ, ನೆರಳೂರಿನ ಲಕ್ಷ್ಮೀಸಾಗರದಲ್ಲಿ ವಾಸಿಸುತ್ತಿದ್ದ ನೈಜೀರಿಯಾದ ಚಿಕ್ಡಂ ಲಿವೋನಸ್(32) ಬಂಧಿತ ಆರೋಪಿ ಎಂದು ತಿಳಿಸಿದರು.

ಬಂಧಿತನಿಂದ 1.50 ಕೋಟಿ ಮೌಲ್ಯದ 1 ಕೆ.ಜಿ 3 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, ಎಲೆಕ್ಟ್ರಾನಿಕ್ ತೂಕದ ಯಂತ್ರ, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅ.23 ರಂದು ಆಡುಗೋಡಿಯ ನ್ಯೂ ಮೈಕೋ ರೋಡ್, ಲಕ್ಕಸಂದ್ರದ ಬಳಿ ಬಂಧಿತ ಆರೋಪಿಯು ಎಂಡಿಎಂಎ ಕ್ರಿಸ್ಟೆಲ್‍ನ್ನು ದ್ವಿ-ಚಕ್ರ ವಾಹನದಲ್ಲಿಟ್ಟು ಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ ಎಂದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು, ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಯು ನೆರಳೂರಿನ ಬಳಿ ಬಾಡಿಗೆ ಮನೆ ಮಾಡಿಕೊಂಡು ತಮ್ಮ ದೇಶದವರಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಹೆಚ್ಚಿನ ಬೆಲೆಗೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ಚಂದ್ರಗುಪ್ತ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News