ಬೆಂಗಳೂರು | ʼಹಿಟ್ ಆ್ಯಂಡ್ ರನ್ʼ ಪ್ರಕರಣ : ಮೂವರು ಆರೋಪಿಗಳ ಬಂಧನ
ಬೆಂಗಳೂರು : ಇಲ್ಲಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಗಾಳ ಬ್ರಿಡ್ಜ್ ಬಳಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ತಿಳಿಸಿದ್ದಾರೆ.
ಜ.14ರಂದು ಮಾಳಗಾಳ ಬ್ರಿಡ್ಜ್ ಬಳಿ ಅಪಘಾತದಲ್ಲಿ ನೇಪಾಳ ಮೂಲದ ದಿನೇಶ್ ಎಂಬಾತ ಮೃತಪಟ್ಟಿದ್ದ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ನಗರದ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಪೊಲೀಸರು ತನಿಖೆ ಆರಂಭಿಸಿದ್ದರು.
ಟ್ರಾಫಿಕ್ ಇನ್‍ಸ್ಪೆಕ್ಟರ್ ಎಸ್.ಟಿ.ಯೊಗೇಶ್ ನೇತೃತ್ವದ ತಂಡ ಅಪಘಾತ ಎಸಗಿದ್ದ ವಾಹನದ ಮೇಲಿದ್ದ ಹಸುವಿನ ಚಿತ್ರದ ಸುಳಿವು ಆಧರಿಸಿ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಅಪಘಾತ ಎಸಗಿ ತಲೆಮರೆಸಿಕೊಂಡಿದ್ದ ಚಾಲಕ ಸುನೀಲ್, ವಾಹನದ ಮಾಲಕ ಸಂದೀಪ್ ಹಾಗೂ ಮೃತನ ಸ್ನೇಹಿತ ಟಿಕ್ ರಾಜ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.