ಬೆಂಗಳೂರು | ‘ಪೀಣ್ಯ ಫ್ಲೈಓವರ್’ ಭಾರೀ ವಾಹನಗಳ ಸಂಚಾರ ನಿರ್ಬಂಧ ತೆರವು

Update: 2024-07-25 16:45 GMT

ಸಾಂದರ್ಭಿಕ ಚಿತ್ರ (Photo: PTI)

ಬೆಂಗಳೂರು : ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಜುಲೈ 29ರಿಂದ ಎಲ್ಲಾ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಪೀಣ್ಯ ಫ್ಲೈಓವರ್‍ನ ಕೆನ್ನಮೆಟಲ್ ಅಪ್ಪರ್ ರ್ಯಾಂಪ್‍ನಿಂದ ಎಸ್.ಆರ್.ಎಸ್.ಡೌನ್ ರ್ಯಾಂಪ್‍ವರೆಗಿನ ಪ್ರೆಸ್ಟ್ರೆಸ್ಡ್ ಕೇಬಲ್‍ಗಳ ಬದಲಿ ಕಾಮಗಾರಿಯ ಕಾರಣದಿಂದ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ 2022ರ ಫೆಬ್ರವರಿಯಲ್ಲಿ ಆದೇಶಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರನ್ವಯ ಜುಲೈ 29ರಿಂದ ಸಂಚಾರಕ್ಕೆ ಮುಕ್ತಗೊಳಿಸಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯಿಂದ ಆದೇಶಿಸಲಾಗಿದೆ.

ನೂತನವಾಗಿ ಪ್ರೆಸ್ಟ್ರೆಸ್ಡ್ ಕೇಬಲ್‍ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಂದ ಬೇಡಿಕೆ ಬಂದ ಕಾರಣ ಬೃಹತ್ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಗ್ರೌಟಿಂಗ್ ಕಾಮಗಾರಿಯ ಸಲುವಾಗಿ ಜು.29ರಿಂದ ಪ್ರತಿ ಶುಕ್ರವಾರ ಮುಂಜಾನೆ 6ರಿಂದ ಶನಿವಾರ ಮುಂಜಾನೆ 6 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಉಳಿದ ಎಲ್ಲ ದಿನಗಳಲ್ಲಿ ಭಾರೀ ವಾಹನ ಅವಕಾಶ ನೀಡಲಾಗಿದೆ. ಜತೆಗೆ ಭಾರಿ ವಾಹನಗಳಿಗೆ ಫ್ಲೈಓವರ್ ಮೇಲೆ ಗರಿಷ್ಠ ವೇಗದ ಮಿತಿಯನ್ನು 40 ಕಿ.ಮೀ.ಗೆ ನಿಗದಿಪಡಿಸಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News