ಬೆಂಗಳೂರು | ಗಾಝಾ ನರಮೇಧಕ್ಕೆ ಒಂದು ವರ್ಷ : ಇಸ್ರೇಲ್ ವಿರುದ್ಧ ಪ್ರತಿಭಟನೆ

Update: 2024-10-05 17:47 GMT

ಬೆಂಗಳೂರು : ಗಾಝಾದಲ್ಲಿ ಫೆಲೆಸ್ತೀನ್ ಜನರ ವಿರುದ್ಧ ಇಸ್ರೇಲ್ ನಡೆಸಿದ ನರಮೇಧಕ್ಕೆ ಒಂದು ವರ್ಷ ಸಮೀಪಿಸುತ್ತಿದೆ. ಈ ದಾಳಿಯನ್ನು ಖಂಡಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ‘ಬೆಂಗಳೂರು ಫಾರ್ ಜಸ್ಟಿಸ್ ಆಂಡ್ ಪೀಸ್’ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಮತ್ತು ಕರ್ನಾಟಕ ಸರಕಾರ ತಕ್ಷಣವೇ ಇಸ್ರೇಲ್ ಆಡಳಿತದೊಂದಿಗಿನ ಸಂಬಂಧವನ್ನು ಕಡಿತಗೊಳಿಸಬೇಕು. ಮತ್ತು ಫೆಲೆಸ್ತೀನಿಯರ ನರಮೇಧದಲ್ಲಿ ಭಾಗಿಯಾಗುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಐಎಸ್‍ಎ ಸದಸ್ಯ ಸಚಿನ್ ಮಾತನಾಡಿ, ಲೆಬನಾನ್, ಯೆಮೆನ್, ಸಿರಿಯಾ, ಇರಾನ್ ವಿರುದ್ಧ ಇಸ್ರೇಲ್ ದಾಳಿಯಲ್ಲಿ ಸಾಮ್ರಾಜ್ಯಶಾಹಿಯ ದುಷ್ಟತನ ಸ್ಪಷ್ಟವಾಗಿ ಗೋಚರಿಸುತ್ತದೆ. ಅಸಂಖ್ಯಾತ ಜೀವಗಳನ್ನು ಕಳೆದುಕೊಂಡಿರುವ ಫೆಲೆಸ್ತೀನಿಯನ್ ಜನರು ಪ್ರತಿರೋಧವನ್ನು ಮುಂದುವರೆಸಿದ್ದಾರೆ. ನಾವು ಅವರೊಟ್ಟಿಗೆ ನಿಲ್ಲಬೇಕು ಎಂದರು.

ಫೆಲೆಸ್ತೀನ್ ಧ್ವಜಕ್ಕೆ ಕರ್ನಾಟಕ ಪೊಲೀಸರು ಏಕೆ ಹೆದರುತ್ತಾರೆ ಎಂಬ ಪ್ರಶ್ನೆಯನ್ನು ನಾವು ಕೇಳಬೇಕು? ಪ್ರತಿರೋಧದ ಬಗ್ಗೆ ಅವರಿಗೆ ಇರುವ ಈ ಭಯ, ಅವರು ನರಮೇಧ ನಡೆಸುತ್ತಿರುವ ಇಸ್ರೇಲ್‍ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಬಯಲುಗೊಳಿಸುತ್ತಿದೆ ಎಂದು ಆರೋಪಿಸಿದರು.

ಸ್ಟುಡೇಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ ಸಂಘಟನೆಯ ಶ್ರೀಲಕ್ಷ್ಮೀ ಮಾತನಾಡಿ, ಗಾಝಾದ ಪ್ರತಿಯೊಂದು ವಿಶ್ವವಿದ್ಯಾನಿಲಯದ ಮೇಲೆ ಬಾಂಬ್ ಸ್ಫೋಟಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಫೆಲೆಸ್ತೀನಿಯರ ಬೆಂಬಲಕ್ಕೆ ಬರಬೇಕಾಗಿದೆ. ದಿಲ್ಲಿ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿದ್ಯಾರ್ಥಿಗಳ ಒಗ್ಗಟ್ಟಿನ ಧ್ವನಿಯನ್ನು ಭಾರತವು ಹಿಂಸಾತ್ಮಕವಾಗಿ ದಮನ ಮಾಡಿದೆ ಎಂದು ದೂರಿದರು.

ಸಿಪಿಎಂ ಸದಸ್ಯ ಪ್ರಕಾಶ್ ಮಾತನಾಡಿ, ಅಂತರ್‍ರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಜಗತ್ತಿನ ಮುಂದೆ ಭಾರತದ ಗೌರವವನ್ನು ನಾಶ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ನಿಲುವು ತೆಗೆದುಕೊಳ್ಳುತ್ತಿದೆ. ಇಸ್ರೇಲ್ ಮತ್ತು ಭಾರತದ ನಡುವಿನ ವ್ಯಾಪಾರವನ್ನು ನಿಲ್ಲಿಸಬೇಕು  ಎಂದು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಬಂದಾಗಿನಿಂದ ಭಾರತ ಫೆಲೆಸ್ತೀನ್ ಪರವಾಗಿಯೇ ಇತ್ತು. ಆದರೆ ಬಿಜೆಪಿ ನೇತೃತ್ವದ ಮೋದಿ ಸರಕಾರ ಬಂದ ಅಧಿಕಾರಕ್ಕೆ ಬಂದ ಮೇಲೆ ಆ ನಿಲುವು ಬದಲಾಗಿದೆ. ಇದು ಭಾರತಕ್ಕೆ ಮೋದಿ ಸರಕಾರ ಮಾಡುವ ಅವಮಾನವಾಗಿದೆ ಎಂದು ಹೇಳಿದರು.

ಜಮಾತ್-ಎ-ಇಸ್ಲಾಮಿ ಹಿಂದ್ ಕರ್ನಾಟಕದ ಯೂಸುಫ್ ಖನ್ನಿ ಯವರು ಮಾತನಾಡಿ, “ಮಕ್ಕಳು, ಅಮಾಯಕ ನಾಗರಿಕರು, ಮಹಿಳೆಯರು, ಆರೋಗ್ಯ ಕಾರ್ಯಕರ್ತರು, ಯುಎನ್ ಕಾರ್ಯಕರ್ತರು - ಎಲ್ಲರೂ  ಕೊನೆಯಿಲ್ಲದೆ ಕೊಲ್ಲಲ್ಪಡುತ್ತಿದ್ದಾರೆ. ಜನರಿಗೆ ಕುಡಿವ ನೀರು ಕೂಡ ಸಿಗುತ್ತಿಲ್ಲ. ಇಸ್ರೇಲ್ ತಡೆಯಲಾಗದ ದುಷ್ಟ, ಆದರೆ ನಾವು ಅಂತಹ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವುದನ್ನು ಮುಂದುವರಿಸಬೇಕು. ಎಲ್ಲಾ ಇಸ್ರೇಲಿ ಸರಕಾರಿ ಸಂಸ್ಥೆಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಹಿಷ್ಕಾರಕ್ಕೆ ನಾವು ಕರೆ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಕಲೆಕ್ಟಿವ್ ಸಂಘಟನೆಯ ಟ್ವಿಶಾ, ಜಾಯಿಂಟ್ ಕಾನ್ಫೆರೇಶನ್ ಆಫ್ ಟ್ರೇಡ್ ಯೂನಿಯನ್ಸ್ ಮುಖಂಡ ಕೆ.ವಿ ಭಟ್, ವಕೀಲ ವಿನಯ್ ಶ್ರೀನಿವಾಸ್, ಮೈತ್ರೇಯಿ, ಅಂಕಣಕಾರ ಶಿವಸುಂದರ್, ಹೋರಾಟಗಾರ ಮಲ್ಲು ಕುಂಬಾರ ಮತ್ತಿತರರು ಉಪಸ್ಥಿತರಿದ್ದರು.

ಹಕ್ಕೊತ್ತಾಯಗಳು

• ಇಸ್ರೇಲ್ ಮಿಲಿಟರಿ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳನ್ನು ಪೂರೈಸುವ ಕಂಪೆನಿಗಳಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಪರವಾನಗಿಗಳನ್ನು ರದ್ದುಗೊಳಿಸಬೇಕು.

• ಫೇಲೆಸ್ತೀನ್ ಮತ್ತು ಭಾರತೀಯರ ಮೇಲೆ ಬಳಸಲಾಗುವ ಶಸ್ತ್ರಾಸ್ತ್ರಗಳು ಮತ್ತು ಕಣ್ಗಾವಲು ತಂತ್ರಜ್ಞಾನದ ಆಮದು ಮತ್ತು ಜಂಟಿ ಉದ್ಯಮಗಳನ್ನು ನಿಲ್ಲಿಸಬೇಕು.

• ಭಾರತೀಯ ಪೊಲೀಸ್ ಅಥವಾ ಭದ್ರತಾ ಪಡೆಗಳಿಗೆ ತರಬೇತಿ ನೀಡುವಲ್ಲಿ ಮತ್ತು ಜಂಟಿ ಕಾರ್ಯಾಚರಣೆಗಳಲ್ಲಿ ಇಸ್ರೇಲಿ ಸರಕಾರ ಮತ್ತು ಏಜೆನ್ಸಿಗಳೊಂದಿಗಿನ ಸಂಬಂಧವನ್ನು ಕೊನೆಗೊಳಿಸಬೇಕು.

• ಇಸ್ರೇಲ್ ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಹಿಷ್ಕಾರಕ್ಕಾಗಿ ಫೆಲೆಸ್ತೀನ್ ಅಭಿಯಾನದ ಕರೆಗೆ ಭಾರತೀಯ ಸಂಸ್ಥೆಗಳು ಕಿವಿಗೊಡಬೇಕು ಮತ್ತು ಇಸ್ರೇಲಿ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಇಸ್ರೇಲ್ ನೊಂದಿಗೆ ಅಸ್ತಿತ್ವದಲ್ಲಿರುವ ಸಹಯೋಗವನ್ನು ಕೊನೆಗೊಳಿಸಬೇಕು ಮತ್ತು ಎಲ್ಲ ಇಸ್ರೇಲಿ ಅಧಿಕಾರಿಗಳನ್ನು ಬಹಿಷ್ಕರಿಸಬೇಕು

• ಕಾರ್ಮಿಕ ಒಪ್ಪಂದವನ್ನು ಕೊನೆಗೊಳಿಸಿ, ಇಸ್ರೇಲ್ ನಿಂದ ಭಾರತೀಯ ಕಾರ್ಮಿಕರನ್ನು ಹಿಂದೆಗೆದುಕೊಳ್ಳಿ ಮತ್ತು ಹೆಚ್ಚಿನ ನೇಮಕಾತಿಯನ್ನು ನಿಲ್ಲಿಸಬೇಕು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News