ಬೆಂಗಳೂರು| ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ: ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರ ವಿರುದ್ಧ ದೂರು ದಾಖಲು
ಬೆಂಗಳೂರು: ನಗರದ ಹೊರವಲಯದಲ್ಲಿ ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಮಾಡಿದ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರ ವಿರುದ್ಧವೇ ಆರೋಪ ಕೇಳಿ ಬಂದಿದ್ದು, ಲೋಕಾಯುಕ್ತ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.
ರೇವ್ ಪಾರ್ಟಿಯಲ್ಲಿ ಭಾಗಿಯಾದವರಿಂದ ಸಿಸಿಬಿ ಅಧಿಕಾರಿಗಳು ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆರ್.ಟಿ.ಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬುವರು ದೂರು ನೀಡಿದ್ದಾರೆ.
ವಿವರ: ರೇವ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿ ನಗರದ ಹೊರವಲಯದ ಫಾರ್ಮ್ ಹೌಸ್‍ನ ಮೇಲೆ ಮೇ 19ರಂದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಮಾಡದೇ ಸುಲಿಗೆಗೆ ಮುಂದಾಗಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ತಲಾ 10 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ.
ಪಾರ್ಟಿಯಲ್ಲಿ ಭಾಗಿಯಾದ್ದ ವ್ಯಕ್ತಿಯೊಬ್ಬರು ಮಾದಕ ಸೇವನೆ ಮಾಡಿರುವುದರ ಕುರಿತ ವೈದ್ಯಕೀಯ ಪರೀಕ್ಷೆ ವರದಿ ಪಾಸಿಟಿವ್ ಬಂದಿರುವುದಾಗಿ ಬೆದರಿಸಲಾಗಿದೆ. ಹಾಗೂ ಅವರ ವಾಹನವನ್ನು ಬಿಡುಗಡೆ ಮಾಡಲು 4.2 ಲಕ್ಷ ರೂ. ಹಣಕ್ಕೆ ಬೇಡಿಕೆ ಇಡಲಾಗಿದೆ. ಪೊಲೀಸರು ತಮಗೆ ಅನುಕೂಲವಾಗುವಂತೆ ವೈದ್ಯಕೀಯ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ‘ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ತನಿಖಾಧಿಕಾರಿಗಳ ವಿರುದ್ಧ ದೂರು ನೀಡಿರುವುದರ ಕುರಿತು ಯಾವುದೇ ಮಾಹಿತಿಯಿಲ್ಲ' ಎಂದು ತಿಳಿಸಿದ್ದಾರೆ.