‘ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ’: ತೆರಿಗೆ ಬಾಕಿ ಮೇಲಿನ ದಂಡ ಶೇ.50 ರಷ್ಟು ಇಳಿಕೆ

Update: 2024-02-20 15:45 GMT

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇ.50ರಷ್ಟು ಕಡಿತ ಸೇರಿದಂತೆ ಇನ್ನಿತರ ಅಂಶಗಳಿರುವ 2024ನೆ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ 2024 ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು.

ವಿಧಾನಸಭೆಯಲ್ಲಿ ಭೋಜನ ವಿರಾಮದ ನಂತರ ನಡೆದ ಕಲಾಪದಲ್ಲಿ ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.

ಈ ವಿಧೇಯಕದಿಂದ ಬೆಂಗಳೂರಿನ ನಾಗರಿಕರಿಗೆ ತೆರಿಗೆ ಬಾಬತ್ತು, ದಂಡ ವಿನಾಯಿತಿ ಸೇರಿ ಸುಮಾರು ರೂ. 2,700 ಕೋಟಿ ರೂ.ಗಳಷ್ಟು ಅನುಕೂಲವಾಗಲಿದೆ. ಜತೆಗೆ ಪಾಲಿಕೆಗೆ ಸುಮಾರು 1 ಸಾವಿರ ಕೋಟಿ ರೂ.ಗಳಷ್ಟು ಆಸ್ತಿ ತೆರಿಗೆ ಬರಲಿದೆ. ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5- 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಹಾಗೂ 3 ಲಕ್ಷದಷ್ಟು ಮಂದಿ ಭಾಗಶಃ ತೆರಿಗೆ ಪಾವತಿದಾರರಿಗೆ ಒಟ್ಟಾರೆ 13 ರಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಶಿವಕುಮಾರ್ ಹೇಳಿದರು.

ಈ ವಿಧೇಯಕದಲ್ಲಿ ಬಡ ಹಾಗೂ ದುರ್ಬಲ ವರ್ಗದವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಸರಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳೆಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇರುವುದಿಲ್ಲ. 1 ಸಾವಿರ ಚದರ ಅಡಿ ವರೆಗಿನ ಸ್ವಯಂ ಬಳಕೆ ಆಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಸತಿ ಮತ್ತು ಮಿಶ್ರ ಆಸ್ತಿದಾರರ (ವಸತಿ ಮತ್ತು ವಾಣಿಜ್ಯ) ಬಾಕಿಯನ್ನು ಎಷ್ಟೇ ವರ್ಷದಿಂದ ಉಳಿಸಿಕೊಂಡಿದ್ದರೂ ಹಿಂದಿನ 5 ವರ್ಷಕ್ಕೆ ಮಾತ್ರ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. 5 ವರ್ಷಕ್ಕಿಂತ ಹಿಂದಿನ ಅವಧಿಗೆ ಬಡ್ಡಿ ಮನ್ನಾ ಮಾಡಲಾಗಿದೆ. ಇದೊಂದು ಜನಸ್ನೇಹಿ ತಿದ್ದುಪಡಿಯಾಗಿದ್ದು, ಸರಕಾರಕ್ಕೆ ನಷ್ಟವಾದರೂ ಪರವಾಗಿಲ್ಲ, ಜನರಿಗೆ ಅನುಕೂಲವಾಗಲಿ ಎಂದು ಈ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಹಿಂದಿನ ಬಿಜೆಪಿ ಸರಕಾರ ತಂದಿದ್ದ ತಿದ್ದುಪಡಿ ವಿಧೇಯಕ ಅಂಗೀಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡ ತೆರಿಗೆ ಮೇಲೆ ದುಪ್ಪಟ್ಟು ದಂಡ ಪಾವತಿಸಬೇಕಾಗಿ ಬಂದು ಬೆಂಗಳೂರು ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಕ್ಕಿದ್ದರು. ತೆರಿಗೆ ಮೊತ್ತಕ್ಕಿಂತ ದಂಡದ ಪ್ರಮಾಣವೇ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಈಗ ಸರಕಾರವು ಹಿಂದಿನ ಸರಕಾರ ಅಂಗಿಕರಿಸಿದ್ದ ಕಾಯ್ದೆಗೆ ತಿದ್ದುಪಡಿ ತಂದು ನಾಗರಿಕರ ತೆರಿಗೆ ಹೊರೆ ಕಡಿಮೆ ಮಾಡಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News