ವೇಶ್ಯಾವಾಟಿಕೆ ದಂಧೆಗಾಗಿ ಮಾನವ ಕಳ್ಳಸಾಗಣೆ | 12 ಅಪ್ರಾಪ್ತೆಯರ ರಕ್ಷಿಸಿದ ಸಿಸಿಬಿ : ಬಿ.ದಯಾನಂದ್

Update: 2024-10-22 15:49 GMT

ಬೆಂಗಳೂರು: ಅಕ್ರಮವಾಗಿ ಮಾನವ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದ ಪ್ರಕರಣದಡಿ 12 ಅಪ್ರಾಪ್ತೆಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ರಕ್ಷಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ ತಿಂಗಳಿನಿಂದ ಅಕ್ಟೋಬರ್‌ ವರೆಗೆ ಸರಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಸಿಸಿಬಿ ಪೊಲೀಸರು 11 ಕಡೆ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ 14ರಿಂದ 17 ವರ್ಷ ವಯಸ್ಸಿನ ಇಬ್ಬರು ಸ್ಥಳೀಯ ಬಾಲಕಿಯರು, ತ್ರಿಪುರಾ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳ ತಲಾ ಒಬ್ಬರು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಮೂಲದ ತಲಾ ಮೂವರು ಸೇರಿ ಒಟ್ಟು 12 ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಉದ್ಯೋಗ, ಶಿಕ್ಷಣ ಮತ್ತಿತರ ಆಮಿಷವೊಡ್ಡಿ ಬಾಲಕಿಯರನ್ನು ಕರೆತಂದಿರುವ ಹಾಗೂ ಕೆಲ ಸಂದರ್ಭಗಳಲ್ಲಿ ಪೋಷಕರೂ ಸಹ ಈ ದಂಧೆಗೆ ಸಹಕರಿಸಿರುವ ಸಾಧ್ಯತೆಯಿದ್ದು ತನಿಖೆ ಮುಂದುವರೆಸಲಾಗಿದೆ. ಒಟ್ಟು 26 ಮಧ್ಯವರ್ತಿಗಳು ಹಾಗೂ ಐವರು ಗಿರಾಕಿಗಳನ್ನು ಬಂಧಿಸಲಾಗಿದೆ ಎಂದು ಬಿ.ದಯಾನಂದ್ ವಿವರಿಸಿದರು.

ಸಿಸಿಬಿ ಪೊಲೀಸರು ಕಾರ್ಯಾಚರಣೆ ಸಮಯದಲ್ಲಿ ರಕ್ಷಿಸಿರುವ ಅಪ್ರಾಪ್ತರನ್ನು ಸರಕಾರೇತರ ಸಂಸ್ಥೆಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮನೋ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ. ವಿದೇಶಿ ಮೂಲದ ಪ್ರಜೆಯೆಂದು ದೃಢಪಟ್ಟ ಬಾಲಕಿಯರನ್ನು ಅವರ ದೇಶಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News