ಜಿಲ್ಲಾ ಕೇಂದ್ರಗಳಲ್ಲಿ ‘ಜನಾಂದೋಲನ’ | ಬಿಜೆಪಿ-ಜೆಡಿಎಸ್‍ಗೆ ಮಾರ್ಗಸೂಚನೆ ನೀಡುವಂತೆ ‘ರಾಷ್ಟ್ರಪತಿಗೆ ಮನವಿ’

Update: 2024-10-22 15:59 GMT

ಬೆಂಗಳೂರು : ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಗರಿಕರ ಸಮಸ್ಯೆಗಳನ್ನು ಮರೆತು, ಕಾಂಗ್ರೆಸ್ ವಿರುದ್ಧ ನಡೆಸುತ್ತಿರುವ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ತಡೆಯಲು ಮಾರ್ಗಸೂಚನೆ ನೀಡಬೇಕೆಂದು ದಸಂಸ(ಸಂಯೋಜಕ) ಜಿಲ್ಲಾ ಕೇಂದ್ರಗಳಲ್ಲಿ ‘ಜನಾಂದೋಲನ’ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ಈ ಕುರಿತು ಪ್ರಕಟನೆ ನೀಡಿರುವ ದಸಂಸ ವಿ.ನಾಗರಾಜ್, ಪ್ರಜಾಪ್ರಭುತ್ವವೆಂದರೆ ಚುನಾವಣೆಗಳಲ್ಲಿ ಸ್ಪರ್ಧಿಸುವುದು, ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿಯಾಗುವ ಪ್ರಕ್ರಿಯೆ ಅಲ್ಲ. ಸಮಾಜದ ನಾಗರೀಕರ ಸಮಗ್ರ ಅಭಿವೃದ್ಧಿ, ಅವರ ಜೀವನಕ್ರಮ ಮತ್ತು ಹಿತಾಸಕ್ತಿಗಳನ್ನು ಕಾಪಾಡುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಸಂಚುಗಳು ಅರ್ಥವಾಗುತ್ತವೆ. ಅನಗತ್ಯವಾಗಿ ‘ಮುಡಾ’ ಪ್ರಕರಣ ಮುಂದಿಟ್ಟುಕೊಂಡು ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಾ ರೈತ, ಕಾರ್ಮಿಕ, ಕೃಷಿ, ನಿರುದ್ಯೋಗ, ಆಹಾರ, ಆರೋಗ್ಯ ಬೆಲೆ ಏರಿಕೆ ಮುಂತಾದ ಮೂಲಭೂತ ಸಮಸ್ಯೆಗಳನ್ನು ಮರೆತು ಜನರನ್ನು ದಿಕ್ಕುತಪ್ಪಿಸುತ್ತಾ, ಅಧಿಕಾರದ ಆಸೆಯಿಂದ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿ.ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಸಾರ್ವಜನಿಕರ ಪರವಾಗಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ರೈತ, ಕಾರ್ಮಿಕ ಮತ್ತು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ, ರೈತರ ಜೀವನ ಆತಂತ್ರಗೊಳಿಸಿದ್ದಾರೆ. ಸಿಎಎ, ಎನ್‍ಪಿಆರ್, ಎನ್‍ಆರ್‍ಸಿಯಂತಹ ಜನ ವಿರೋಧಿ ಕಾನೂನುಗಳು ಮತ್ತು ಇಡಬ್ಲ್ಯೂಎಸ್ ನಂತಹ ಮೀಸಲಾತಿ ನೀತಿಗಳನ್ನು ತಂದು ಬಹುಜನರಲ್ಲಿ ಗೊಂದಲಗಳನ್ನು ಸೃಷ್ಟಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಿರುದ್ಯೋಗ ಸಮಸ್ಯೆಗಳು ನಿವಾರಿಸುವುದಾಗಿ ಹೇಳಿಕೊಳ್ಳುತ್ತಾ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ದೇಶದ ಯುವಕರಲ್ಲಿ ಅಭದ್ರತೆಯನ್ನು ಹೆಚ್ಚಿಸುತ್ತಿದ್ದಾರೆ. ಚುನಾವಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಅಧಿಕಾರ ದಾಹದಿಂದ, ಹಿಂದುತ್ವ, ಅಖಂಡ ಭಾರತ ಮುಂತಾದ ಭಾವನಾತ್ಮಕ ವಿಷಯಗಳನ್ನು ಪ್ರಚಾರಪಡಿಸುತ್ತಾ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಗುಪ್ತ ಕಾರ್ಯಸೂಚಿಗಳಾದ ಮನುಧರ್ಮಶಾಸ್ತ್ರವನ್ನು ಮರುಸ್ಥಾಪಿಸಲು ಹೊರಟಿದ್ದಾರೆ ಎಂದು ಅವರು ದೂರಿದ್ದಾರೆ.

ಸರಕಾರವನ್ನು ಅಸ್ಥಿರಗೊಳಿಸುವ ಮತ್ತು ಅಂಬೇಡ್ಕರ್ ಸಿದ್ಧಾಂತಗಳನ್ನು ಅಪ್ರಸ್ತುತಗೊಳಿಸಲು ಹೊರಟಿರುವ ಈ ಕೋಮುವಾದಿ ಶಕ್ತಿಗಳ ಕುತಂತ್ರಗಳನ್ನು ನಿಯಂತ್ರಿಸಲು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಾ, ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಇವರನ್ನು ಕಾನೂನು ಬದ್ಧವಾಗಿ ನಿಯಂತ್ರಿಸಬೇಕು ಎಂದು ವಿ.ನಾಗರಾಜ್ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News