ಬೆಂಗಳೂರಿನಲ್ಲಿ ಮುಂದುವರೆದ ಮಳೆ : ಯಲಹಂಕದಲ್ಲಿ 1 ಸಾವಿರ ಮನೆಗಳಿಗೆ ನುಗ್ಗಿದ ಮಳೆ ನೀರು

Update: 2024-10-22 14:24 GMT

ಬೆಂಗಳೂರು : ನಗರದಲ್ಲಿ ನಾಲ್ಕು ದಿನದಿಂದ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆ ಮತ್ತೆ ಮುಂದುವರಿದಿದ್ದು, ಸೋಮವಾರ ರಾತ್ರಿಯೆಲ್ಲಾ ಸುರಿದು ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ವೇಳೆಗೆ ಮತ್ತೆ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ತೊಂದರೆಗೀಡಾಗಿದ್ದು, ಜನರು ಮತ್ತೆ ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ. ಯಲಹಂಕ ವಲಯವೊಂದರಲ್ಲೇ 1030 ಮನೆಗಳೀಗೆ ನೀರು ನುಗ್ಗಿದೆ.

ನಗರದಲ್ಲಿ ಅ.1 ರಿಂದ ಅ.21 ರವರೆಗೆ 156.6 ಮಿಮೀ ಮಳೆಯಾಗಿದ್ದು, ಸಾಮಾನ್ಯ 104.6 ಮಿಮೀ ಮಳೆಗೆ ಹೋಲಿಸಿದರೆ ಶೇ.50 ಮಳೆ ಹೆಚ್ಚಳವಾಗಿದೆ. ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ನಗರದಲ್ಲಿರುವ ಮಾಗಡಿ ರಸ್ತೆ, ಭಾಷ್ಯಂ ಸರ್ಕಲ್, ಮೆಜಸ್ಟಿಕ್, ಕೆ.ಆರ್ ಪುರಂ, ಯಶವಂತಪುರ, ಮೇಕ್ರಿ ಸರ್ಕಲ್, ಮಲ್ಲೇಶ್ವರಂ, ಸೇರಿದಂತೆ ನಗರದ ಹಲವಡೆ ಭಾರೀ ಮಳೆಯಾಗಿದ್ದು, ಕೆಂಗೇರಿ ಸುತ್ತಮುತ್ತ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ.

ನಗರದಲ್ಲಿ ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ನಗರದ ಯಲಹಂಕ, ದಾಸರಹಳ್ಳಿ ಹಾಗೂ ಮಹದೇವಪುರ ಸೇರಿ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಬಿಬಿಎಂಪಿ, ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್, ಅಗ್ನಿ ಶಾಮಕ ದಳದ ತಂಡಗಳು 24/7 ಕಾರ್ಯನಿರ್ವಹಿಸುತ್ತಿವೆ.

ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‍ಮೆಂಟ್: ಯಲಹಂಕ ಕರೆಯ ಪಕ್ಕದಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್‍ಮೆಂಟ್ ಕೆರೆಯ ಮಟ್ಟಕ್ಕಿಂತ ಕೆಳಗಿದ್ದು, ಕೆರೆ ಕೋಡಿ ಹೊರಹರಿವಿನಿಂದಾಗಿ ಅಪಾರ್ಟ್‍ಮೆಂಟ್‍ಗೆ ನೀರು ನುಗ್ಗಿದೆ. ನೀರಿನ ಹರಿವಿನ ಮಟ್ಟ ಸಾಕಷ್ಟಿದೆ. ಇದರಿಂದ ಅಪಾರ್ಟ್‍ಮೆಂಟ್ ಹಾಗೂ ರಸ್ತೆಯಲ್ಲಿ ನೀರು ನಿಂತಿದ್ದು, ನಿವಾಸಿಗಳನ್ನು ಸ್ಥಳಾಂತರ ಮಾಡುವುದರ ಜೊತೆಗೆ ಕುಡಿಯುವ ನೀರು ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿದೆ.

ಅಪಾರ್ಟ್‍ಮೆಂಟ್‍ನಲ್ಲಿ 604 ಮನೆಗಳಿದ್ದು, ಸುಮಾರು 2500 ನಿವಾಸಿಗಳಿದ್ದಾರೆ. ಇನ್ನೂ ಮೂರು ದಿನ ಮಳೆಯಾಗುವ ಮುನ್ಸೂಚನೆಯಿದ್ದು, ಅಪಾರ್ಟ್‍ಮೆಂಟ್‍ನಲ್ಲಿರುವ ಎಲ್ಲ ನಿವಾಸಿಗಳನ್ನು ಸುರಕ್ಷತೆಯ ದೃಷ್ಟಿಯಿಂದ 8 ದಿನಗಳ ಕಾಲ ಬೇರೆಡೆ ಸ್ಥಳಾಂತರವಾಗಲು ಬಿಬಿಎಂಪಿ ಸೂಚಿಸಲಾಗಿದೆ. ಅದರಂತೆ ಈಗಾಗಲೇ ಬಹುತೇಕ ನಿವಾಸಿಗಳು ಬೇರೆಡೆ, ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಎನ್‍ಡಿಆರ್‌ಎಫ್‍ನ 16 ಬೋಟ್‍ಗಳ ಮೂಲಕ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಅಪಾರ್ಟ್‍ಮೆಂಟ್‍ಗೆ ಬರುವ ನೀರನ್ನು ತಡೆಯಲು ಪಾಲಿಕೆಯಿಂದ ತಾತ್ಕಾಲಿಕವಾಗಿ ಅಡ್ಡಲಾಗಿ ಮರಳು ಚೀಲಗಳು ಹಾಕಲಾಗಿದೆ. ಅಲ್ಲದೆ ನೀರುಗಾಲುವೆಯ ಪಕ್ಕದಲ್ಲೇ ಕಚ್ಚಾ ಡ್ರೈನ್ ಮಾಡಿ ಅದರ ಮೂಲಕ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಸ್ಥಳದಲ್ಲಿ ಎನ್‍ಡಿಆರ್‌ಎಫ್ ನ 75 ಸಿಬ್ಬಂದಿ, ಬಿಬಿಎಂಪಿಯ 25 ಅಧಿಕಾರಿ/ಸಿಬ್ಬಂದಿ, ಎಸ್‍ಡಿಆರ್‌ಎಫ್ ನ 25 ಸಿಬ್ಬಂದಿ, ಅಗ್ನಿ ಶಾಮಕ ದಳದ 20 ಸಿಬ್ಬಂದಿ ಸೇರಿ ಅಗ್ನಿ ಶಾಮಕದ 2 ವಾಹನಗಳು ಸ್ಥಳದಲ್ಲಿವೆ.

ಟಾಟಾ ನಗರ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ: ಇನ್ನು ಮಳೆಯಿಂದಾಗಿ ಜಲಾವೃತವಾಗೊಂಡಿರುವ ಪ್ರದೇಶವಾದ ಟಾಟಾ ನಗರ ವ್ಯಾಪ್ತಿಯಲ್ಲಿ ಜಲಾವೃತವಾಗಿರುವ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಟ ಬೈರೇಗೌಡ, ಆಡಳಿತಗಾರ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನರಸಾಪುರ ಕೆರೆ ಮತ್ತು ದೊಡ್ಡಬೊಮ್ಮಸಂದ್ರ ಕೆರೆ ತುಂಬಿ ಕೋಡಿ ಮೂಲಕ ಬರುವ ನೀರು ನೀರುಗಾಲುವೆಗಳಲ್ಲಿ ತುಂಬಿ ಹರಿಯುತ್ತಿದೆ. ಈ ಪರಿಣಾಮ ಬ್ಯಾಟರಾಯನಪುರ ವ್ಯಾಪ್ತಿಯ ಬದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಸುರಭಿ ಲೇಔಟ್, ಸೋಮೇಶ್ವರ ಬಡಾವಣೆ ಬಸವ ಸಮಿತಿ, ಟಾಟಾ ನಗರ, ಚಿಕ್ಕ ಬೊಮ್ಮಸಂದ್ರ, ಆಂಜನೇಯ ಲೇಔಟ್, ವಾಯುನಂದನ ಲೇಔಟ್ ಸಂಪೂರ್ಣ ಜಾಲಾವೃತವಾಗಿದ್ದು, ನೀರನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ.

ಸ್ಥಳೀಯ ನಿವಾಸಿಗಳಿಗೆ ಬಿಬಿಎಂಪಿ ವತಿಯಿಂದ ಹಾಲು, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ನಿವಾಸಿಗಳ ಸ್ಥಳಾಂತರಕ್ಕಾಗಿ ಈಗಾಗಲೇ 1 ಬೋಟ್ ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 2 ಬೋಟ್‍ಗಳನ್ನು ನಿಯೋಜಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ಚಿತ್ರಕೂಟ ಅಪಾರ್ಟ್‍ಮೆಂಟ್: ಸಹಕಾರ ನಗರದ ಚಿತ್ರಕೂಟ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಕುಸಿತದಿಂದಾಗಿ, ಅಪಾರ್ಟ್‍ಮೆಂಟ್ ಪಕ್ಕದ ರಾಜಕಾಲುವೆಯಲ್ಲಿ ಹರಿಯುವ ಚರಂಡಿ ನೀರು ಅಪಾರ್ಟ್‍ಮೆಂಟ್‍ಗೆ ನುಗ್ಗಿದೆ. ಇದರಿಂದಾಗಿ 3 ಅಡ್ಡ ರಸ್ತೆಗಳು ಜಲಾವೃತಗೊಂಡಿವೆ. ಈ ಅಪಾರ್ಟ್‍ಮೆಂಟ್ ಪಕ್ಕದಲ್ಲಿರುವ ಕೈಸರ್ ರೆಸಿಡೆನ್ಸಿ ಜಲಾವೃತಗೊಂಡಿದ್ದು, ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗಿದೆ.

ರಮಣಶ್ರೀ ಕ್ಯಾಲಿಫೋರ್ನಿಯಾ: ಇಲ್ಲಿನ ಪುಟ್ಟೇನಹಳ್ಳಿ ಕೆರೆ ಪಕ್ಕದ ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್‍ನಲ್ಲಿ ನೀರುಗಾಲುವೆ ನೀರು ಹರಿದು ಜಲಾವೃತವಾಗಿದೆ. ಕೆರೆಯ ಕಟ್ಟೆ ಉದ್ದಕ್ಕೂ ಹ್ಯೂಮ್ ಪೈಪ್ ಹಾಕಿ ನೀರು ಹೊರ ಹಾಕಲಾಗುತ್ತಿದೆ. ಸುಮಾರು 25 ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲು ಎನ್‍ಡಿಆರ್‌ಎಫ್ ತಂಡವು ಕಾರ್ಯಪ್ರವೃತ್ತವಾಗಿದೆ.

ಮಹದೇವಪುರ ವಲಯ: ಮಹದೇವಪುರ ವಲಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಸೋಮವಾರ ರಾತ್ರಿಯಿಂದ ಹೊರಮಾವು - 73 ಮಿಮೀ, ಮಾರತಹಳ್ಳಿ - 34 ಮಿಮೀ ಅತಿ ಹೆಚ್ಚು ಮಳೆಯಾಗಿದೆ. ಯಲಹಂಕ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಇಲ್ಲಿನ ಸಾಯಿಬಾಬಾ ಲೇಔಟ್ ಮತ್ತು ಗೆದ್ದಲಹಳ್ಳಿ ಬಳಿಯ ವಡ್ಡರಪಾಳ್ಯದಲ್ಲಿ ಹೆಬ್ಬಾಳ ವ್ಯಾಲಿಯಿಂದ ನೀರು ಹಿಮ್ಮುಖವಾಗಿ ಚಲಿಸಿ ಜಲಾವೃತವಾಗಿದೆ. ನೀರು ನುಗ್ಗಿರುವ ಮನೆಗಳಲ್ಲಿ, ಪಂಪ್‍ಗಳ ಮೂಲಕ ನೀರು ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ನಿಂತಿರುವ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ.

ಬೈರತಿ ಗ್ರಾಮ ಮತ್ತು ಬ್ಲೆಸ್ಸಿಂಗ್ ಗಾರ್ಡನ್ ಪ್ರದೇಶ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಇನ್ನು ಹಾಲನಾಯಕನಹಳ್ಳಿ ಕೆರೆ ಕೋಡಿ ತುಂಬಿ ರೇನ್ಬೋ ಡ್ರೈವ್ ಅಪಾರ್ಟ್‌ಮೆಂಟ್ ಪ್ರದೇಶ ಹಾಗೂ ಜುನ್ನಸಂದ್ರದಲ್ಲಿ ನೀರು ನುಗ್ಗಿದೆ. ರಸ್ತೆ ಬದಿ ನೀರು ನಿಂತಿರುವುದನ್ನು ತೆರವುಗೊಳಿಸಲಾಗಿದೆ.

ದಾಸರಹಳ್ಳಿ ವಲಯ: ದಾಸರಹಳ್ಳಿ ವಲಯದ ಅಬ್ಬಿಗೆರೆ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೋಡಿಯಿಂದ ರಸ್ತೆಗೆ ನೀರು ನುಗ್ಗಿ ಸಪ್ತಗಿರಿ ಮತ್ತು ನಿಸರ್ಗ ಲೇಔಟ್‍ಗಳಲ್ಲಿ ನೀರು ತುಂಬಿದ್ದು, ನೀರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ನಿಸರ್ಗ ಲೇಔಟ್ ಮತ್ತು ಸಪ್ತಗಿರಿ ಲೇಔಟ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ನೀರನ್ನು ತೆರವುಗೊಳಿಸಲಾಗಿದೆ. ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಪಾರ್ವತಿ ಲೇಔಟ್, ಮಿತ್ರ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಬೆಲ್ಮಾರ್ಗ್ ಲೇಔಟ್‍ಗಳಲ್ಲಿ 25 ರಿಂದ 30 ಮನೆಗಳು ಜಲಾವೃತಗೊಂದ್ದು, ನೀರು ತೆರವು ಕಾರ್ಯ ಪ್ರಗತಿಯಲ್ಲಿದೆ.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News