ಪರಿಸರಸ್ನೇಹಿ ಇಂಧನ, ಸಿಮೆಂಟ್, ಉಕ್ಕು ಉತ್ಪಾದನೆಗೆ ಒತ್ತು : ಎಂ.ಬಿ.ಪಾಟೀಲ್

Update: 2024-10-22 15:08 GMT

ಬೆಂಗಳೂರು : ರಾಜ್ಯದಲ್ಲಿ ಪರಿಸರಸ್ನೇಹಿ ಇಂಧನ (ಗ್ರೀನ್ ಎನರ್ಜಿ) ಕ್ಷೇತ್ರದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ಯಥೇಚ್ಛ ಅವಕಾಶಗಳಿವೆ. ಇದನ್ನು ಬೃಹತ್ ಕೈಗಾರಿಕೆ ಇಲಾಖೆ ಮತ್ತು ಇಂಧನ ಇಲಾಖೆ ಎರಡೂ ಜತೆಗೂಡಿ ಸಾಧಿಸಬೇಕಾಗಿದೆ. ಈ ದೃಷ್ಟಿಯಿಂದ ಸೂಕ್ತ ನೀತಿಯನ್ನು ರೂಪಿಸಲಾಗುವುದು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ಆಯೋಜಿಸಿದ್ದ ಗ್ರೀನ್ ಎನರ್ಜಿ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಲಯಗಳಿಗೆ ಸಂಬಂಧಪಟ್ಟ ಸರಕಾರದ ವಿಷನ್ ಗ್ರೂಪ್‍ಗಳ ಚೊಚ್ಚಲ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದ ಅವರು, ಈ ಸಂಬಂಧ ಇಂಧನ ಸಚಿವ ಕೆ.ಜೆ. ಜಾರ್ಜ್ ಜತೆ ಉದ್ಯಮಿಗಳು ಮತ್ತು ಆಸಕ್ತ ಹೂಡಿಕೆದಾರರ ಸಭೆಯನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ಈ ವಲಯವನ್ನು ಬೆಳೆಸಬೇಕೆಂಬುದು ಸರಕಾರದ ಮುಕ್ತ ನಿಲುವಾಗಿದೆ. ಮುಂದಿನ ಹೆಜ್ಜೆಯಾಗಿ ಇಂಧನ ಸಚಿವರ ಜತೆ ಮಾತುಕತೆ ನಡೆಸಲಾಗುವುದು. ಏಕೆಂದರೆ, ಇಂಧನ ಇಲಾಖೆ ಇದರಲ್ಲಿ ಪ್ರಮುಖ ಪಾಲು ಹೊಂದಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ʼಅವಾಡಾʼ ಕಂಪೆನಿಯ ಸಿಇಒ ಕಿಶೋರ್ ನಾಯರ್ ಮಾತನಾಡಿ, ʼಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ನಾವು ರಾಜ್ಯ ಸರಕಾರದ ಜತೆ 45 ಸಾವಿರ ಕೋಟಿ ರೂ. ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸರಕಾರವು ಸೂಕ್ತ ಪ್ರೋತ್ಸಾಹಕ ಭತ್ತೆ ಮತ್ತು ನೀತಿ ಜಾರಿಗೆ ತಂದರೆ ನಾವು ಎಲೆಕ್ಟ್ರೋಲೈಟ್ ಮತ್ತು ಬ್ಯಾಟರಿ ಉತ್ಪಾದನೆಯ ಕಡೆಗೆ ಗಮನ ಹರಿಸಬಹುದು ಎಂದು ಅವರು ಹೇಳಿದರು.

ಜತೆಗೆ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಅದರಿಂದ, ಪರಿಸರ ಸ್ನೇಹಿ ಮೆಥನಾಲ್ ಮತ್ತು ಪರಿಸರಸ್ನೇಹಿ ಜಲಜನಕ(ಗ್ರೀನ್ ಹೈಡ್ರೋಜನ್)ದ ಉತ್ಪಾದನೆಗೂ ಆದ್ಯತೆ ಕೊಡಬಹುದು. ರಾಜಾಸ್ಥಾನ ಮತ್ತು ಮಹಾರಾಷ್ಟ್ರ ಈಗಾಗಲೇ ಈ ಸಂಬಂಧ ನೀತಿಗಳನ್ನು ಜಾರಿಗೆ ತಂದಿವೆ ಎಂದು ಅವರು ಸಭೆಯ ಗಮನ ಸೆಳೆದರು.

ಇದಕ್ಕೆ ಸ್ಪಂದಿಸಿದ ಸಚಿವ ಎಂ.ಬಿ.ಪಾಟೀಲ್, ʼಉದ್ಯಮಿಗಳು 5-6 ಮಿಲಿಯನ್ ಡಾಲರ್ ಹಣ ಮತ್ತು 5 ಗಿಗಾವ್ಯಾಟ್ ವಿದ್ಯುತ್ತಿನ ಅಗತ್ಯದ ಬಗ್ಗೆ ಗಮನ ಸೆಳೆದಿದ್ದಾರೆ. ಜೊತೆಗೆ, ಇದಕ್ಕೆ ಮಂಗಳೂರು ಬಂದರಿನ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶ ಸೂಕ್ತ ತಾಣವಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಇದನ್ನು ಈಡೇರಿಸಿದರೆ ಪರಿಸರಸ್ನೇಹಿ ಅಮೋನಿಯಾ ಮತ್ತು ಜಲಜನಕಗಳ ಉತ್ಪಾದನೆ ಸುಗಮವಾಗಲಿದೆ. ಈ ಬಗ್ಗೆ ಸರಕಾರವು ಸಕಾರಾತ್ಮಕ ಭಾವನೆ ಹೊಂದಿದೆ’ ಎಂದು ನುಡಿದರು.

ಇದಲ್ಲದೆ, ರಾಜ್ಯದಲ್ಲಿ ʼಗ್ರೀನ್ ಇಂಡಸ್ಟ್ರಿಯಲ್ ಪಾರ್ಕುಗಳನ್ನು ಸ್ಥಾಪಿಸಿದರೆ ಈ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಬಹುದು ಎನ್ನುವ ಸಲಹೆಯೂ ಬಂದಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ನೀತಿ ಇರುವುದು ಗೊತ್ತಾಗಿದೆ. ಇಂತಹ ಕೈಗಾರಿಕೆಗಳಿಗೆ ನೀರು ಮತ್ತು ವಿದ್ಯುತ್ತಿನ ಪೂರೈಕೆ ಸುಗಮವಾಗಿ ಇರಬೇಕಾಗುತ್ತದೆ. ಇದಕ್ಕಾಗಿಯೇ ರಾಜ್ಯ ಸರಕಾರವು ಕೈಗಾರಿಕಾ ಪ್ರದೇಶಗಳಿಗೆ ನದಿ ಮೂಲಗಳಿಂದ ಅಗತ್ಯ ಪ್ರಮಾಣದ ನೀರನ್ನು ಪೂರೈಸುವ ಉಪಕ್ರಮವನ್ನು ಈಗಾಗಲೇ ಘೋಷಿಸಿದೆ ಎಂದು ಅವರು ಹೇಳಿದರು.

ಪರಿಸರ ಸ್ನೇಹಿ ಜಲಜನಕ ಮತ್ತು ಸೌರಕೋಶ ಉತ್ಪಾದನಾ ಘಟಕಗಳಿಗೆ ಈಗಾಗಲೇ ಜಿಎಸ್ಟಿಯಲ್ಲಿ ಸಾಕಷ್ಟು ರಿಯಾಯಿತಿಗಳನ್ನು ಕೊಡಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

ಸಿಮೆಂಟ್, ಉಕ್ಕು ವಲಯದತ್ತಲೂ ಗಮನ: ಕೋರ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಷನ್ ಗ್ರೂಪಿನ ಸಭೆಯನ್ನೂ ನಡೆಸಿದ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಗೆ ಇರುವ ಅವಕಾಶಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಜತೆಗೆ, ಈ ಸಂಬಂಧ ಸರಕಾರವು ಕೈಗೊಳ್ಳಬೇಕಾಗಿರುವ ನಾನಾ ಉಪಕ್ರಮಗಳ ಸ್ವರೂಪ ಹೇಗಿರಬೇಕೆಂದು ಉದ್ಯಮಿಗಳ ಸಲಹೆ ಪಡೆಯಲಾಗಿದೆ ಎಂದಿದ್ದಾರೆ.

ಕೈಗಾರಿಕಾ ಕ್ಷೇತ್ರದಲ್ಲಿ ಈಗ ಅತ್ಯಾಧುನಿಕ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹೀಗಾಗಿ ಬಂಡವಾಳ ಹೂಡಿಕೆಯೂ ಜಾಸ್ತಿಯಾಗುತ್ತಿದೆ. ಸರಕಾರವು ಸಿಮೆಂಟ್, ಉಕ್ಕು ಮತ್ತು ಹೆವಿ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಲಾಭದಾಯಕ ಉತ್ಪಾದನೆಯನ್ನು ಸಾಧ್ಯವಾಗಿಸಲು ಬೇಕಿರುವ ಮೂಲಸೌಲಭ್ಯ ಮತ್ತು ಬೆಂಬಲ ಎರಡನ್ನೂ ಒದಗಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗ್ರೀನ್ ಎನರ್ಜಿ ವಿಷನ್ ಗ್ರೂಪ್ ಸಭೆಯಲ್ಲಿ ರೆನ್ಯೂ ಪವರ್ ಅಧ್ಯಕ್ಷ ವಿವೇಕ್ ಸಿಂಘ್ಲಾ, ಎಮ್ವೀ ಸೋಲಾರ್ ನ ಸ್ಥಾಪಕ ಡಿ.ವಿ.ಮಂಜುನಾಥ, ಆ್ಯಮ್-ಪ್ಲಸ್ ಸಿಇಒ ಶರದ್ ಪುಂಗಾಲಿಯಾ ಅವರು ವರ್ಚುಲ್ ರೂಪದಲ್ಲಿ ಭಾಗವಹಿಸಿದ್ದರು.

ಕೋರ್ ಮ್ಯಾನುಫ್ಯಾಕ್ಚರಿಂಗ್ ವಿಷನ್ ಗ್ರೂಪ್ ಸಭೆಯಲ್ಲಿ ಬಲ್ದೋಟ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಕುಮಾರ್, ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಬಹಿರಜಿ ಘೋರ್ಷಡೆ, ಅಲ್ಟ್ರಾ ಟೆಕ್ ಮುಖ್ಯಸ್ಥ ರಾಜನಾರಾಯಣನ್ ಉಪಸ್ಥಿತರಿದ್ದರು. ಜಿಂದಾಲ್ ಸ್ಟೀಲ್ ವಕ್ರ್ಸ್ ಸಿಇಒ ಜಯಂತ್ ಆಚಾರ್ಯ ವರ್ಚುಯಲ್ ರೂಪದಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News