ಮುನಿರತ್ನರ ಶಾಸಕ ಸ್ಥಾನ ರದ್ದುಗೊಳಿಸಲು ಶೋಷಿತ ಸಮುದಾಯಗಳ ಒಕ್ಕೂಟ ಆಗ್ರಹ

Update: 2024-09-23 18:06 GMT

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ದಲಿತ ಹಾಗೂ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ತನ್ನ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಹೀನಕೃತ್ಯ ಮಾಡುತ್ತಿದ್ದು, ಅವರನ್ನು ಕೂಡಲೇ ಬಿಜೆಪಿಯಿಂದ ಹಾಗೂ ಶಾಸಕ ಸ್ಥಾನದಿಂದ ರದ್ದುಗೊಳಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಆಗ್ರಹಿಸಿದೆ.

ಸೋಮವಾರ ನಗರದ ಮೌರ್ಯ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ಸಮುದಾಯದ ಬಗ್ಗೆ ತುಚ್ಚವಾಗಿ ಮಾತನಾಡಿರುವ ‘ಮುನಿರತ್ನ’ರ ಸಾರ್ವಜನಿಕ ಜೀವನದ ಅಜ್ಞಾನವನ್ನು ತೋರಿಸುತ್ತದೆ. ಬಿಜೆಪಿಯವರು ಅಧಿಕಾರ ನಡೆಸಲು ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. ಮುನಿರತ್ನ ರೌಡಿ ಹಿನ್ನೆಲೆಯಿಂದ ಬಂದಿರುವವರು, ಅವರಿಂದ ಯಾವ ನ್ಯಾಯವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕು. ಈ ಕುರಿತು ಅ.1ರಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಸರಕಾರ ಮುನಿರತ್ನ ವಿರುದ್ಧ ಅಗತ್ಯ ಕ್ರಮವಹಿಸದಿದ್ದರೇ, ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಚಾಲಕ ಅನಂತ ನಾಯಕ ಎನ್. ಮಾತನಾಡಿ, ಮುನಿರತ್ನ ನಡೆಸಿರುವ ಅಕ್ರಮಗಳ ಎಲ್ಲ ದಾಖಲೆಗಳು ಇದ್ದರೂ ಅವರ ಮೆಲೆ ಬಿಜೆಪಿ ನಾಯಕರು ಯಾವುದೇ ಕ್ರಮ ವಹಿಸಿಲ್ಲ. ಬಿಜೆಪಿಯ ಮುಖಂಡರನ್ನೇ ಮುಗಿಸಲು ಮುನಿರತ್ನ ಸಂಚು ಮಾಡಿದರೂ ಅವರನ್ನು ಪಕ್ಷದಿಂದ ಯಾಕೆ ಇನ್ನೂ ಉಚ್ಚಾಟನೆ ಮಾಡಿಲ್ಲ. ಮಹಿಳೆಯರನ್ನು ದುರುಪಯೋಗ ಪಡಿಸಿಕೊಂಡರು ಬಿಜೆಪಿಯವರು ಯಾಕೆ ಪ್ರತಿಭಟಿಸಲಿಲ್ಲ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲನ ಸಮಿತಿ ಸದಸ್ಯರಾದ ಜೆ.ಡಿ.ಗೋಪಾಲ್, ಆದರ್ಶ್ ಯಲ್ಲಪ್ಪ, ಆರ್.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

‘ಮುನಿರತ್ನ ಹೇಳಿಕೆ ಸಮಾಜವೇ ತಲೆತಗ್ಗಿಸುವಂತದ್ದು, ಮುನಿರತ್ನ ಕುರಿತು ತನಿಖೆ ನಡೆಸಲು ಎಸ್‍ಐಟಿ ರಚನೆಯಾಗಿದ್ದು, ತನಿಖೆಯನ್ನು ಶೀಘ್ರವಾಗಿ ಮುಗಿಸಿ ಅವರಿಗೆ ಶಿಕ್ಷೆಗೆ ಗುರಸಿಪಡಿಸಬೇಕು. ಮುನಿರತ್ನ ಒಬ್ಬರೇ ಅಲ್ಲದೇ ಅನೇಕರು ಆ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಗೋಪಾಲಗೌಡ, ದೇವರಾಜ ಅರಸು ಅಂತವರು ರಾಜಕೀಯ ಮಾಡಿ, ಕನ್ನಡ ಭಾಷೆಯನ್ನು ಹೇಗೆ ಬಳಸಬೇಕು ಎಂಬುದನ್ನು ಅರಿತಿದ್ದರು. ಆದರೆ ಮುನೀರತ್ನ ಅಂತವರು ಅಸಭ್ಯವಾಗಿ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕಿದೆ. ಯಾವುದೇ ಕಾರಣಕ್ಕೂ ಅವರಿಗೆ ಚುನಾವಣೆಯಲ್ಲಿ ಅವಕಾಶ ಕೊಡಬಾರದು. ಅದು ಪ್ರಜಾಪ್ರಭುತ್ವಕ್ಕೆ ಹಾನಿಯಾಗುತ್ತದೆ’

-ಮಾವಳ್ಳಿ ಶಂಕರ್, ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News