ಕಾವೇರಿ ಆರತಿ | ಆರಂಭದಲ್ಲೇ ಆಡಳಿತ-ಪ್ರತಿಪಕ್ಷಗಳ ನಡುವೆ ಜಟಾಪಟಿ

Update: 2024-09-23 17:46 GMT

ಬೆಂಗಳೂರು : ಗಂಗಾ ಆರತಿ ಮಾದರಿಯಲ್ಲೇ ‘ಕಾವೇರಿ ಆರತಿ’ ಕಾರ್ಯಕ್ರಮ ನಡೆಸುವ ಸಂಬಂಧ ರಾಜ್ಯ ಸರಕಾರ ಅಧ್ಯಯನ ಕೈಗೊಂಡಿರುವುದು ಆಡಳಿತ ಹಾಗೂ ಪ್ರತಿಪಕ್ಷ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದು, ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ.

ಮಸ್ತಿ ಮಾಡಲು ಹೋಗಿದ್ದಾ?: ‘ಕಾವೇರಿ ಆರತಿ ನಡೆಸುವ ಸಲುವಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ಕಾವೇರಿ ನಿಗಮದ ಅಧಿಕಾರಿಗಳು 3ದಿನಗಳ ಕಾಲ ಹರಿದ್ವಾರ, ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿರುವಾಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಕಳುಹಿಸುತ್ತಿರುವುದು ಯಾತಕ್ಕೆ?. ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಹೋಗಬೇಕು ಎನ್ನುವುದಾದರೆ ಸಚಿವರು ತಮ್ಮ ತಂಡದೊಂದಿಗೆ ಅಲ್ಲಿ ಹೋಗಿ ಮಾಡಿದ್ದಾದರೂ ಏನು? ಸರಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಲು ಹೋಗಿದ್ದಾ?’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬಿಜೆಪಿಗರ ಸ್ವತ್ತಲ್ಲ: ಧಾರ್ಮಿಕ ಆಚರಣೆ, ಸಂಪ್ರದಾಯಗಳು ಗಂಗಾರತಿ, ಕಾವೇರಿ ಆರತಿ ಇವೆಲ್ಲವೂ ಬಿಜೆಪಿಗರ ಗುತ್ತಿಗೆ ಅಲ್ಲ. ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ವಾರಾಣಸಿ, ಹರಿದ್ವಾರಗಳಲ್ಲಿ ಈ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಎಲ್ಲ ಪರಂಪರೆಗಳನ್ನು ಕಾಂಗ್ರೆಸ್ ಪಕ್ಷವು ಮುಂದುವರಿಸಿಕೊಂಡು ಬಂದಿರುವುದಕ್ಕೆ ಇಂದು ಬಿಜೆಪಿಯವರು ಈ ವಿಷಯವನ್ನುಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ, ಅಶೋಕ್‍ಗೆ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಪ್ರಕಟಣೆ ನೀಡಿರುವ ಚಲುವರಾಯಸ್ವಾಮಿ, ಧಾರ್ಮಿಕ ಆಚರಣೆ ನೆಪದಲ್ಲಿ ಕಿಡಿಗೇಡಿ ಕೆಲಸ ಮಾಡಿದರೆ ಕಾನೂನು ಕ್ರಮವನ್ನು ಕೈಗೊಳ್ಳುವುದು ಸರಕಾರಗಳ ಜವಾಬ್ದಾರಿ. ಕಾನೂನು ಬಾಹಿರ ಘಟನೆಗಳು ಆದಾಗ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದು ಗಣೇಶ ಅಥವಾ ಇನ್ಯಾವುದೇ ಕಾರ್ಯಕ್ರಮಗಳಾಗಲಿ, ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ವ್ಯಂಗ್ಯವಾಡುವುದು ಈ ಹಿಂದೆ ಉಪ ಮುಖ್ಯಮಂತ್ರಿ, ಗೃಹ ಸಚಿವರಾಗಿದ್ದ ಅಶೋಕ್‍ಗೆ ಶೋಭೆಯಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿಯವರ ಈ ವರ್ತನೆಯನ್ನು ಗಮನಿಸಿದರೆ ಇವರು ನಿಜವಾದ ಧಾರ್ಮಿಕ ವಿರೋಧಿಗಳು ಎಂಬುದು ಗೊತ್ತಾಗುತ್ತದೆ. ಇವರು ಎಲ್ಲ ವಿಷಯಕ್ಕೂ ರಾಜಕೀಯ ಲೇಪನ ಮಾಡುತ್ತಾರೆಂದು ಅನಿಸುತ್ತದೆ. ಕಾಂಗ್ರೆಸ್‍ನವರು ಇಂತಹದ್ದೊಂದು ಮಹತ್ಕಾರ್ಯ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಂತೂ ಮಾಡಲು ಆಗಲಿಲ್ಲ. ಇದನ್ನು ನಾವು ಬೆಂಬಲಿಸಬೇಕಿತ್ತು. ಆದರೆ ಇವರು ಮಾಡುತ್ತಿರುವುದೇನು? ಬರೀ ಟೀಕೆ, ವ್ಯಂಗ್ಯ’ ಎಂದು ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News