ಬಿಜೆಪಿ ನಾಯಕರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ : ಡಾ.ಎಚ್.ಡಿ.ರಂಗನಾಥ್

Update: 2024-09-23 18:11 GMT

ಡಾ.ಎಚ್.ಡಿ.ರಂಗನಾಥ್

ಬೆಂಗಳೂರು : ‘ಎಚ್‍ಐವಿ ಪೀಡಿತ ಮಹಿಳೆಯನ್ನು ಬಳಸಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಬಿಜೆಪಿ ಶಾಸಕ ಮುನಿರತ್ನ ಯತ್ನಿಸಿದ್ದರು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದುದರಿಂದ, ಬಿಜೆಪಿ ನಾಯಕರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ’ ಎಂದು ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಸಲಹೆ ನೀಡಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಎಚ್‍ಐವಿ ಸೋಂಕಿತ ರಕ್ತವನ್ನು ತಗುಲಿಸಲು ಮುನಿರತ್ನ ಯೋಜಿಸಿದ್ದನ್ನು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮುನಿರತ್ನ ಜೊತೆ ಯಾರು ಯಾರಿಗೆ ವೈಮನಸ್ಸು, ಅಸಮಾಧಾನ ಇತ್ತೋ ಅವರೆಲ್ಲರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಲು ಬಯಸುತ್ತೇನೆ ಎಂದು ಹೇಳಿದರು.

ರಾಜ್ಯದ ರಾಜಕಾರಣದಲ್ಲಿ ಇಂತಹ ಪರಿಸ್ಥಿತಿ ಬಂದಿದೆ ಅನ್ನೋದು ನಿಜಕ್ಕೂ ವಿಷಾದನೀಯ. ಈ ಹಿಂದೆ ಕ್ಷಯ, ಕುಷ್ಠ ರೋಗ ಬಂದವರನ್ನು ಸಾಮಾಜಿಕವಾಗಿ ಹೊರಗೆ ಇರಿಸಲಾಗುತ್ತಿತ್ತು. ಎಚ್‍ಐವಿ ಸೋಂಕಿತರ ಕುರಿತು ಎಷ್ಟೇ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಸಮಾಜದ ಮನಸ್ಥಿತಿ ಹಾಗೆ ಇದೆ. ಅಂತಹ ಎಚ್‍ಐವಿ ಪೀಡಿತರನ್ನು ಮುನಿರತ್ನ ಯಾವ ಬಗೆಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ರಂಗನಾಥ್ ತಿಳಿಸಿದರು.

ಜನರ ಭಿಕ್ಷೆಯಿಂದ ಆಯ್ಕೆಯಾಗುವ ಶಾಸಕರ ಮನೋಭಾವನೆ, ಜನರ ಸೇವೆ ಕಡೆ ಇರಬೇಕು. ಆದರೆ, ಮುನಿರತ್ನ ಎಚ್‍ಐವಿ ರೋಗಿಯನ್ನು ಹನಿಟ್ರ್ಯಾಪ್‍ಗೆ ಬಳಸಿಕೊಳ್ಳಲು ಯತ್ನಿಸಿದ್ದು ವಿಷಾದನೀಯ. ಅದೇ ರೀತಿ, ಒಕ್ಕಲಿಗರ ಮಹಿಳೆಯರ ಬಗ್ಗೆ ಅವಾಚ್ಯ ಶಬ್ಧಗಳ ಬಳಕೆ, ದಲಿತರ ನಿಂದನೆ ಮಾಡಿರುವ ಮುನಿರತ್ನ ವಿರುದ್ಧ ತನಿಖೆಗೆ ಎಸ್‍ಐಟಿ ರಚನೆ ಮಾಡುವಂತೆ ನಾವು ಮಾಡಿದ ಮನವಿಗೆ ಸ್ಪಂದಿಸಿ ಸರಕಾರ ಎಸ್‍ಐಟಿ ರಚನೆ ಮಾಡಿದೆ ಎಂದು ಅವರು ತಿಳಿಸಿದರು.

ಮುನಿರತ್ನ ವಿರುದ್ಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಸುಟ್ಟು ಹಾಕಿದ, ಮಹಿಳಾ ಕಾರ್ಪೋರೇಟರ್ ಮೇಲೆ ದೌರ್ಜನ್ಯ, ಮತದಾರರ ಗುರುತಿನ ಚೀಟಿ ಹಗರಣದ ಆರೋಪಗಳು ಇವೆ. ಎಸ್‍ಐಟಿ ಉನ್ನತಮಟ್ಟದ ತನಿಖೆ ನಡೆಸಿ, ಆದಷ್ಟು ಬೇಗ ವರದಿ ನೀಡಲಿ ಎಂದು ರಂಗನಾಥ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ.ಮಧುಸೂದನ್, ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News