ಬೆಂಗಳೂರು | ಬ್ಯಾಂಕ್ ನಿವೃತ್ತರ ವೇತನದ ತಾರತಮ್ಯ ಖಂಡಿಸಿ ಪ್ರತಿಭಟನೆ

Update: 2024-09-23 18:02 GMT

ಬೆಂಗಳೂರು : ನಿವೃತ್ತರ ವೇತನದ ತಾರತಮ್ಯವನ್ನು ನಿವಾರಿಸಲು ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ಧ ಬ್ಯಾಂಕ್ ನಿವೃತ್ತ ವೇತನದಾರರು ಮತ್ತು ನಿವೃತ್ತಿ ಸಂಸ್ಥೆಗಳ ಸಮನ್ವಯ ಸಮಿತಿಯಿಂದ ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಸೋಮವಾರ ಈ ವೇಳೆ ಮಾತನಾಡಿದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ, ಸಿಬಿಪಿಆರ್‌ಒ ಜಂಟಿ ಸಂಚಾಲಕ ಕೆ.ವೇದವ್ಯಾಸ ಆಚಾರ್ಯ, ಕೇಂದ್ರ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿದ ಸಂದರ್ಭಗಳಲ್ಲಿ ಪಿಂಚಣಿದಾರರಿಗೆ ಅನ್ಯಾಯವಾಗುತ್ತಿದೆ. ನಿವೃತ್ತರ ಪಿಂಚಣಿಯನ್ನು ಇಲ್ಲಿಯವರೆಗೆ ನವೀಕರಿಸಿಲ್ಲ. ಮೂಲ ಪಿಂಚಣಿಯನ್ನು ಆಯಾ ಬ್ಯಾಂಕ್ ನೌಕರರು ನಿವೃತ್ತರಾದ ದಿನಾಂಕದಿಂದ ಸ್ಥಗಿತಗೊಳಿಸಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಒಕ್ಕೂಟವಾದ ಭಾರತೀಯ ಬ್ಯಾಂಕ್‍ಗಳ ಸಂಘವು, ನಿವೃತ್ತರ ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಲು ನಿರಾಕರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಬಿಪಿಆರ್‍ಸಿ ರಾಜ್ಯ ಘಟಕದ ಅಧ್ಯಕ್ಷ ಎಂ.ಆರ್.ಗೋಪಿನಾಥ್ ರಾವ್ ಮಾತನಾಡಿ, ಹಿರಿಯ ನಾಗರಿಕರಿಗೆ ಕೈಗೆಟುಕುವ ಆರೋಗ್ಯ ವಿಮೆ ನೀತಿಯನ್ನು ಜಾರಿ ಮಾಡಬೇಕು. ವಿಮೆ ಕಂತಿಗೆ ಜಿಎಸ್‍ಟಿ ಹೆಚ್ಚಿಸಿರುವುದರಿಂದ ಅನ್ಯಾಯವಾಗುತ್ತಿದೆ. ನಿವೃತ್ತರಿಗೆ ಜಿಎಸ್ಟಿ ವಿನಾಯತಿ ನೀಡಬೇಕು. ವೇತನ ಮತ್ತು ಗ್ರಾಚ್ಯುಟಿ ಲೆಕ್ಕಾಚಾರಕ್ಕಾಗಿ ವಿಶೇಷ ಭತ್ಯೆಯನ್ನು ಪರಿಗಣಿಸಬೇಕು. ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಬಿಪಿಆರ್‍ಸಿ ಸಲಹೆಗಾರ ಜಿ.ಡಿನದಾಫ್, ಸಿಬಿಪಿಆರ್‌ಒ ಪದಾಧಿಕಾರಿ ದತ್ತಾತ್ರಿ ನಾಡಿಗೇರ್, ಎಸ್.ಪಿ.ರಾವ್, ಸಿ.ಶಿವಪ್ರಕಾಶ್, ಎಸ್.ನಾಗರಾಜ, ಶಿವರಾಮ್ ಆಳ್ವ, ಜೆ.ಎಸ್.ಜಗದೀಶ್, ಸಿಬಿಪಿಆರ್‌ಒ ಸಂಚಾಲಕ ಎ.ಎನ್.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News