ಬಿಟ್ ಕಾಯಿನ್ ಹಗರಣ: ಡಿವೈಎಸ್ಪಿ ಸುಳಿವು ನೀಡಿದವರಿಗೆ ಬಹುಮಾನ
ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್(47)ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರ ಕುರಿತು ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಸಿಐಡಿ ಘೋಷಿಸಿದೆ.
ಬಿಟ್ ಕಾಯಿನ್ ಅಕ್ರಮ ಹಗರಣದ ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್ 5ನೇ ಆರೋಪಿಯಾಗಿದ್ದಾರೆ.
ಶ್ರೀಧರ್ ಕೆ ಪೂಜಾರ್ ತಲೆಮರೆಸಿಕೊಂಡಿದ್ದು, ಇವರ ಬಗ್ಗೆ ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟವರಿಗೆ ಬಹುಮಾನ ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. ಆರೋಪಿ ಶ್ರೀಧರ್ ಪೂಜಾರ್ ಬಗ್ಗೆ ಮಾಹಿತಿಯಿದ್ದರೆ ಸಿಐಡಿ ಫೈನಾನ್ಶಿಯಲ್ ಇಂಟೆಲಿಜೆನ್ಸ್ ವಿಭಾಗ ಬೆಂಗಳೂರು., ದೂ.ಸಂ. 080-22094485ಗೆ ಸಂಪರ್ಕಿಸಿ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸಿಐಡಿ, ಎಸ್‍ಐಟಿ ಬಂಧಿಸಲು ತೆರಳಿದ್ದ ವೇಳೆ ಎಸ್‍ಐಟಿ ತಂಡದ ಕಾರಿಗೆ ಮತ್ತೊಂದು ವಾಹನ ಢಿಕ್ಕಿ ಹೊಡೆಸಿ ಶ್ರೀಧರ್ ಪರಾರಿಯಾಗಿದ್ದ. ಫೆ.27ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಂಬೇಡ್ಕರ್ ವೀಧಿಯ ಕಾಫಿ ಬೋರ್ಡ್ ಜಂಕ್ಷನ್ ಬಳಿ ಈ ಘಟನೆ ನಡೆದಿತ್ತು. ಕಾರಿಗೆ ಢಿಕ್ಕಿ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಸ್‍ಐಟಿ ಪ್ರಕರಣ ದಾಖಲಿಸಿದೆ.