ಮುಸ್ಲಿಮರು, ಕ್ರೈಸ್ತರು ದೇಶದಲ್ಲಿ ಬದುಕುವುದಕ್ಕೆ ಬಿಜೆಪಿ ಸರಕಾರ ಭಯದ ವಾತಾವರಣ ಉಂಟು ಮಾಡಿದೆ : ವೀರಪ್ಪ ಮೊಯ್ಲಿ

Update: 2024-04-13 17:08 GMT

ಬೆಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಗಣತಿಯನ್ನು ನಿಲ್ಲಿಸಿದ್ದು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋದಿ ಸರಕಾರ ಯುವಕರಿಗೆ ಉದ್ಯೋಗವನ್ನು ನೀಡುತ್ತಿಲ್ಲ, ಸಾರ್ವಜನಿಕ ಕೈಗಾರಿಕೆಗಳು ಮುಚ್ಚುತ್ತಿರುವ ಕಾರಣ ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ. ಜಾತಿ ಗಣತಿ ಬಗ್ಗೆ ಮಾತೇ ಆಡುತ್ತಿಲ್ಲ ಎಂದರು.

ಮೋದಿ ಸರಕಾರ ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದು ಹೇಳಿದರು, ಆದರೆ, ಮಾಡಲಿಲ್ಲ. ಜಿಎಸ್‍ಟಿಯಿಂದ ಸಣ್ಣ, ಸಣ್ಣ ವ್ಯಾಪಾರಿಗಳು ಸತ್ತು ಹೋಗಿದ್ದಾರೆ. ಜಿಎಸ್‍ಟಿಯನ್ನು ಪರಾಮರ್ಶಿಸಿ ಏಕರೂಪ ಮಾದರಿ ತರುತ್ತೇವೆ. ಎಂಎಸ್‍ಪಿ ಬಗ್ಗೆ ಬಿಜೆಪಿ ಚಕಾರವೇ ಎತ್ತುತ್ತಿಲ್ಲ ಎಂದು ವೀರಪ್ಪ ಮೊಯ್ಲಿ ದೂರಿದರು.

ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಇದನ್ನು ದೇವೇಗೌಡರು ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಇದೊಂದು ಅಭ್ಯಾಸ ಎಲ್ಲಾ ವಿಚಾರಗಳಲ್ಲಿಯೂ ಇದೆ. ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಯಾರೂ ಏನೂ ಹೇಳಲು ಹೋಗುವುದಿಲ್ಲ ಎಂದು ಹೇಳಿದರು.

ದೇಶದಲ್ಲಿ ಮುಸ್ಲಿಮರು 20 ಕೋಟಿ, ಕ್ರೈಸ್ತರು 5 ಕೋಟಿ ಇದ್ದಾರೆ. ಇವರಿಗೆ ದೇಶದಲ್ಲಿ ಬದುಕುವುದಕ್ಕೆ ಬಿಜೆಪಿ ಸರಕಾರ ಭಯದ ವಾತಾವರಣ ಉಂಟು ಮಾಡಿದೆ. ಪ್ರಜಾಪ್ರಭುತ್ವವನ್ನೇ ತಲೆಕೆಳಗು ಮಾಡಿ ದೇಶವನ್ನೇ ಹಾಳು ಮಾಡಲಾಗುತ್ತಿದೆ. ಮುಸಲೋನಿ, ಹಿಟ್ಲರ್, ಸದ್ದಾಂ ಹುಸೇನ್ ಸಮಯದ ಆಡಳಿತವನ್ನು ನೆನಪಿಸುವಂತಿದೆ ಎಂದು  ಟೀಕಿಸಿದರು.

ದೇಶದ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಿದೆ. ದೇಶದ ಜಿಡಿಪಿ ಸಂಪೂರ್ಣವಾಗಿ ಕುಸಿದು ಹೋಗಿದ್ದು ಕೇವಲ ಸುಳ್ಳು ಜಿಡಿಪಿ ಮಾತ್ರ ನಮಗೆ ತೋರಿಸಲಾಗುತ್ತಿದೆ. ಭಾರತ ಬಿಲಿಯನೇರ್‍ಗಳ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ. ಶ್ರೀಮಂತ ಹೆಚ್ಚು ಶ್ರೀಮಂತನಾಗುತ್ತಿದ್ದು, ಬಡವ ಬಡವನಾಗಿಯೇ ಸಾಯುತ್ತಿದ್ದಾನೆ ಎಂದು  ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News