ಉಪಚುನಾವಣೆ ಫಲಿತಾಂಶ : ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮ

Update: 2024-11-23 16:59 GMT

ಬೆಂಗಳೂರು : ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿ ಗೆಲುವಿನ ನಗು ಬೀರಿದರು.

ಉಪಚುನಾವಣೆ ನಡೆದ ಚನ್ನಪಟ್ಟಣ, ಸುಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳು ಮಾತ್ರವಲ್ಲದೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಕಚೇರಿಗಳ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ಸಂತೋಷ ಲಾಡ್ ಪರ ಘೋಷಣೆ ಕೂಗಿದರು.

ʼರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆʼ ಎಂದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹೇಳಿದರು.

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ ಎಂದೂ ಉಲ್ಲೇಖಿಸಿದರು.

ತೊಡೆ ತಟ್ಟಿ ಸೋತ ಬಿಜೆಪಿ ಅಭ್ಯರ್ಥಿ:

ಸಂಡೂರು ಕ್ಷೇತ್ರದ ಉಪಚುನಾವಣೆ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ತೊಡೆತಟ್ಟಿ ಪ್ರಚೋದಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಅವರನ್ನು ತಡೆದು ಕಾರು ಹತ್ತಿಸಿ ಕಳುಹಿಸಿದ ದೃಶ್ಯ ಕಂಡಿತು.

ಬೈ, ಬೈ ಬೊಮ್ಮಾಯಿ :

‘ಶಿಂಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಂಗ್ರೆಸ್ ಭಾವುಟಗಳನ್ನು ಹಾರಿಸಿದ್ದು ಮಾತ್ರವಲ್ಲದೆ, ‘ಬೈ, ಬೈ ಬೊಮ್ಮಾಯಿʼ ಎಂದು ಬರಹ ಪ್ರದರ್ಶನ ಮಾಡಿ ಘೋಷಣೆ ಕೂಗಿದರು.

ಮನೆ ಮಕ್ಕಳು ಪೋಸ್ಟರ್ ವೈರಲ್:

‘ಸಿ.ಪಿ.ಯೋಗೇಶ್ವರ್ ಭಾರೀ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರ ಫೋಟೋ ಜತೆಗೆ ‘ಮನೆ ಮಕ್ಕಳು' ಎನ್ನುವ ಬರಹದ ಪೋಸ್ಟರ್ ಪ್ರದರ್ಶಿಸಿದರು. ಇದೇ ವೇಳೆ ಸಿಪಿವೈ ಅಭಿಮಾನಿಗಳು ‘ಜಾಲಿ ಜಾಲಿ..ಬಿಜೆಪಿ-ಜೆಡಿಎಸ್ ಖಾಲಿ ಖಾಲಿʼ ಎಂದು ಘೋಷಣೆ ಹಾಕಿ ಸಂಭ್ರಮಿಸಿದ್ದು ನಡೆಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News