ಸುದ್ದಿ ವಾಹಿನಿಯ ಸಿಇಒ, ನಿರೂಪಕಿಯ ತಂಡದಿಂದ 100ಕ್ಕೂ ಹೆಚ್ಚು ಮಂದಿಯ ಸುಲಿಗೆ ಆರೋಪ : ಇಬ್ಬರ ಸೆರೆ, ಹಲವರು ನಾಪತ್ತೆ

Update: 2024-07-06 07:20 GMT

ಸಾಂದರ್ಭಿಕ ಚಿತ್ರ (PC : Meta AI)

ಬೆಂಗಳೂರು : 'ರಾಜ್ ನ್ಯೂಸ್' ಸುದ್ದಿವಾಹಿನಿಯ ಸಿಇಒ ವೆಂಕಟೇಶ್, ಖಾಸಗಿ ಸುದ್ದಿವಾಹಿನಿಯೊಂದರ ನಿರೂಪಕಿ ದಿವ್ಯಾವಸಂತಾ ಹಾಗೂ ಅವರ ತಂಡ ನಗರದ ಮಸಾಜ್ ಪಾರ್ಲ‌ರ್'ಗಳು, ವೈದ್ಯರು ಸೇರಿ 100ಕ್ಕೂ ಹೆಚ್ಚು ಮಂದಿಯನ್ನು ಹನಿಟ್ರ್ಯಾಪ್ ರೀತಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.

ಇಂದಿರಾನಗರದ 'ಸ್ಪಾ'ವೊಂದರ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂ. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣದಡಿ 'ರಾಜ್ ನ್ಯೂಸ್' ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ ಸೇರಿ ಇಬ್ಬರನ್ನು ಇಲ್ಲಿನ ಜಿ.ಬಿ.ನಗರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸುದ್ದಿವಾಹಿನಿಯ ಸಿಇಒ ವೆಂಕಟೇಶ್‌ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್‌ ಎಂಬವರು ಬಂಧಿತರಾಗಿದ್ದು, ನಿರೂಪಕಿ ದಿವ್ಯಾವಸಂತಾ ಸೇರಿ ಹಲವರು ನಾಪತ್ತೆಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 3 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ನಿರೂಪಕಿ ದಿವ್ಯಾ ವಸಂತಾ, ಸಚಿನ್ ಹಾಗೂ ಆಕಾಶ್ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಇಂದಿರಾನಗರದ 'ಟ್ರಿ ಸ್ಟ್ರಾ ಅಂಡ್ ಬ್ಯೂಟಿ' ಪಾರ್ಲ‌ರ್'ನ ವ್ಯವಸ್ಥಾಪಕ ಶಿವಶಂಕ‌ರ್ ಎಂಬುವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ವೆಂಕಟೇಶ್, ದಿವ್ಯಾ ವಸಂತಾ ಹಾಗೂ ಅವರ ತಂಡ ಯತ್ನಿಸಿತ್ತು. ಈ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವೆಂಕಟೇಶ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಸುಲಿಗೆ ಕೃತ್ಯಗಳಿಗೆ ವಾಟ್ಸಪ್‌ನಲ್ಲಿ 'ಸೈ ರಿಸರ್ಚ್ ಟೀಂ' ಹೆಸರಿನ ಗ್ರೂಪ್ ಅನ್ನು ವೆಂಕಟೇಶ್‌ ಹಾಗೂ ದಿವ್ಯಾವಸಂತಾ ಮಾಡಿಕೊಂಡಿದ್ದರು. ಈ ಗ್ರೂಪ್‌ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾವಸಂತಾ, ಆರು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಳು. ಅಲ್ಲದೆ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ರೀಲ್ಸ್‌ಗಳ ಮೂಲಕ ಖ್ಯಾತಿ ಪಡೆದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ ನ್ಯೂಸ್ ವಾಹಿನಿಯ ಸಿಇಒ ವೆಂಕಟೇಶ್ ಹಾಗೂ ದಿವ್ಯಾ ವಸಂತಾ ಅವರ ತಂಡ ಮಸಾಜ್ ಪಾರ್ಲ‌ರ್'ಗಳು ಹಾಗೂ ವೈದ್ಯರು ಸೇರಿ ಹಣವಂತರಿಗೆ ಹನಿಟ್ರ್ಯಾಪ್ ರೀತಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಇದುವರೆಗೆ ಸುಮಾರು 100ಕ್ಕೂ ಹೆಚ್ಚಿನ ಜನರಿಂದ ಈ ತಂಡ ಸುಲಿಗೆ ಮಾಡಿದೆ ಎನ್ನಲಾಗಿದೆ. ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರೂ.ವರೆಗೆ ಆನ್‌ಲೈನ್‌ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್‌ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಈ ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾವಸಂತಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಬಂಧನ ಭೀತಿಗೊಳಗಾದ ದಿವ್ಯಾ, ಮನೆಯಲ್ಲಿದ್ದ ಕ್ಯಾಮೆರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ತೆಗೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News