ಮೂಲಭೂತವಾದ ಎದುರಿಸಲು ಪರ್ಯಾಯ ಅಗತ್ಯ : ಸಚಿವ ದಿನೇಶ್ ಗುಂಡೂರಾವ್

Update: 2024-10-02 16:30 GMT
ಮೂಲಭೂತವಾದ ಎದುರಿಸಲು ಪರ್ಯಾಯ ಅಗತ್ಯ : ಸಚಿವ ದಿನೇಶ್ ಗುಂಡೂರಾವ್
  • whatsapp icon

ಬೆಂಗಳೂರು : ಗೋಡ್ಸೆ ಮತ್ತು ಸಾವರ್ಕರ್ ಸಿದ್ಧಾಂತ ಮೂಲಭೂತವಾದವಾಗಿದೆ. ಅದು ನಮ್ಮ ದೇಶದ ಸಿದ್ಧಾಂತ ಅಲ್ಲ. ಅದನ್ನು ಎದುರಿಸಲು ಪರ್ಯಾಯ ಯೋಚನೆ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಜಾಗೃತ ಕರ್ನಾಟಕ ಅಹರ್ನಿಶಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಗೋಡ್ಸೆ ಎಂಬ ವ್ಯಕ್ತಿ ಆತನ ದೃಷ್ಟಿಯ ಭಾರತ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯನ್ನು ಹತ್ಯೆ ಮಾಡಲು ಗೋಡ್ಸೆ ಯಾವ ರೀತಿ ತೀರ್ಮಾನ ಮಾಡಿದರು. ಅವರ ಜೀವನ ಏನು ಎಂಬುದನ್ನು ಗಾಂಧೀಜಿಯ ಹಂತಕ ಪುಸ್ತಕದಲ್ಲಿ ನೋಡಬಹುದು. ಗೋಡ್ಸೆ ಹೆಸರು ಬಂದಾಗ ಸಾವರ್ಕರ್ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಗೋಡ್ಸೆ ಮನಸ್ಥಿತಿಯನ್ನು ಹೇಗೆ ಎದುರಿಸಬೇಕು ಎನ್ನುವುದು ಬಹಳಮುಖ್ಯ. ಮೂಲಭೂತವಾದ ಸಿದ್ಧಾಂತವು ಯುರೋಪ್ ದೇಶಗಳಿಂದ ಬಂದಿದೆ. ಅದನ್ನು ಗೋಡ್ಸೆ ಮತ್ತು ಸಾವರ್ಕರ್ ಅಳವಡಿಹಿಕೊಂಡಿದ್ದರು. ಮೂಲಭೂತವಾದ ದೇಶ ಸೃಷ್ಟಿಸಬೇಕು ಎನ್ನುವುದು ಅವರ ಆಶಯ ಆಗಿತ್ತು. ಆದರೆ ಗಾಂಧೀಜಿ ಪ್ರಜಾಪ್ರಭುತ್ವದ ಕನಸು ಕಂಡವರು. ಎಲ್ಲರನ್ನು ಒಗ್ಗೂಡಿಸುವ ಸಿದ್ಧಾಂತ ಇಟ್ಟುಕೊಂಡವರು ಎಂದು ಹೇಳಿದರು.

ಹಿಂದೂರಾಷ್ಟ್ರ ನಿರ್ಮಾಣದ ಉದ್ದೇಶದಿಂದ ಯಾವ ಕೆಲಸವಾದರೂ ಮಾಡಲಾಗುತ್ತಿದೆ. ಮೂಲಭೂತವಾಗಿ ಯೋಚನೆ ಮಾಡುವವರೂ ಮಾಡಿದ್ದೆಲ್ಲ ಸರಿ ಎನ್ನುತ್ತಾರೆ. ವಿರೋಧಿಗಳನ್ನು ಶತ್ರುಗಳನ್ನಾಗಿ ನೋಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂಕಣಕಾರ ಪ್ರೊ.ಎ.ನಾರಾಯಣ್ ಮಾತನಾಡಿ, ಗಾಂಧೀಜಿ ಇವತ್ತಿಗೂ ಬದುಕುಳಿದಿದ್ದಾರೆ. ಜತೆಗೆ ದೇಶದಲ್ಲಿ ಗೋಡ್ಸೆ ಸಂತತಿ ಕೂಡ ಹೆಚ್ಚುತ್ತಿದೆ. ಹಿಂದಿನ ಸತ್ಯಗಳನ್ನು ಮಾತ್ರ ‘ಗಾಂಧೀಜಿಯ ಹಂತಕ’ ಗೋಡ್ಸೆ ಎಂಬ ವ್ಯಕ್ತಿ ಆತನ ದೃಷ್ಟಿಯ ಭಾರತ ಪುಸ್ತಕದಲ್ಲಿ ಕಾಣಬಹುದು. ಗಾಂಧೀಜಿ ಕೋಲೆಯಾದ ನಂತರ ಆರೆಸ್ಸೆಸ್‍ನವರು ನಮಗೂ ಗೋಡ್ಸೆಗೂ ಸಂಬಂಧ ಇಲ್ಲ ಎಂದು ನಂಬಿಸಿದರು. ಗೋಡ್ಸೆಯನ್ನು ನೇಣಿಗೆ ಹಾಕುವಾಗ ಆರೆಸ್ಸೆಸ್ ಗೀತೆಯನ್ನು ಪಠಿಸಿದ್ದ ಎಂದು ಹೇಳಿದರು.

ಗಾಂಧೀಜಿಯನ್ನು ಗೋಡ್ಸೆ ಕೊಲೆ ಮಾಡಿದ ಎನ್ನುವುದಕ್ಕಿಂತ ವ್ಯವಸ್ಥಿತ ಸಂಚಿನ ಕೊಲೆ ಎಂದು ಹೇಳಬೇಕು. ದೇಶವನ್ನು ಹಿಂದೆ ತೆಗೆದುಕೊಂಡು ಹೋಗುವ ಉದ್ದೇಶವನ್ನು ಗೋಡ್ಸೆ ಮತ್ತು ಸಾವರ್ಕರ್ ಹೊಂದಿದ್ದರು. ಅದಕ್ಕಾಗಿ ಸಂವಿಧಾನೋತ್ತರ ಸಮಾಜದ ಭೀತಿಯಿಂದ ಗಾಂಧಿಯನ್ನು ಕೊಲ್ಲಲಾಯಿತು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಪ್ರೊ.ಶ್ರೀಧರಮೂರ್ತಿ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ, ಪತ್ರಕರ್ತ ಮನೋಜ್ ಕುಮಾರ್ ಗುದ್ದಿ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ಜಾಗೃತ ಕರ್ನಾಟಕದ ಸೀತಾಲಕ್ಷ್ಮಿ, ಗಂಗಾಧರ ಮುಳಗುಂದ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News