‘ಸ್ಮಾರ್ಟ್ ಬಸ್ ನಿಲ್ದಾಣ’ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ನಗರದ ಕೆ.ಆರ್.ವೃತ್ತದ ನೃಪತುಂಗ ರಸ್ತೆಯಲ್ಲಿ ಸೇಪಿಯನ್ಸ್ ಇಂಡಿಯಾ ಪ್ರೈವೆಟ್ ಲಿ., ಶಿಲ್ಪಾ ಫೌಂಡೇಶನ್‍ನ ಸಿಎಸ್‍ಆರ್ ಅಡಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿ ಬಿಬಿಎಂಪಿಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ‘ಸೇಪಿಯನ್ಸ್ ಹಾಗೂ ಶಿಲ್ಪಾ ಫೌಂಡೇಶನ್ ನೇತೃತ್ವದಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್ ಬಸ್ ನಿಲ್ದಾಣವು ಹಲವು ವೈಶಿಷ್ಟತೆಗಳಿಂದ ಕೂಡಿದ್ದು, ಇದು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದರಲ್ಲಿರುವ ಸೌಲಭ್ಯಗಳನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಬಳಕೆ ಮಾಡಿದಲ್ಲಿ ಯೋಜನೆಯು ಯಶಸ್ವಿಯಾಗಲಿದೆ ಎಂದು ತಿಳಿಸಿದರು.
ಸ್ಮಾರ್ಟ್ ಬಸ್ ನಿಲ್ದಾಣವು ಇತರ ಬಸ್ ನಿಲ್ದಾಣಗಳಿಗಿಂತ ವಿಭಿನ್ನವಾಗಿದ್ದು, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಮಹಿಳೆಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಿದೆ. ಇಲ್ಲಿರುವ ಪ್ಯಾನಿಕ್ ಬಟನ್ ಹಾಗೂ ಸಿಸಿ ಕ್ಯಾಮರಾಗಳು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿ. ಇಂತಹ ಯೋಜನೆಗಳು ಇನ್ನೂ ವಿಸ್ತರಣೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅತ್ಯಾಧುನಿಕ ಹಾಗೂ ಸುಸಜ್ಜಿತ ಬಸ್ ನಿಲ್ದಾಣವನ್ನು ಬಿಬಿಎಂಪಿಗೆ ಹಸ್ತಾಂತರಿಸಲಿದ್ದು, ಈ ನಿಲ್ದಾಣದಲ್ಲಿ ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸಲಾಗುವುದಿಲ್ಲ. ಫಲಕ (ಡಿಸ್ಪ್ಲೇ ಬೋರ್ಡ್)ಗಳಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಬಿಬಿಎಂಪಿ ಅಥವಾ ರಾಜ್ಯ ಸರಕಾರ ಮಾಹಿತಿಗಳನ್ನು ಪಾಲಿಕೆ ಬಿತ್ತರಿಸಬಹುದು ಎಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಸೇಪಿಯನ್ಸ್ ಸಂಸ್ಥೆಯ ಸುರಜೀತ್ ಬಸು, ರಾಜೇಶ್ ಕೆಂಕೆರೆ, ಸುಶೀಲ್ ಮಹಲ, ಗಿರೀಶ್ ಕುಮಾರ್, ಶಿಲ್ಪಾ ಫೌಂಡೇಶನ್ ಸಂಸ್ಥಾಪಕ ಅಚ್ಚುತ್‍ಗೌಡ, ಅನಿರೀತ್ ಸಿ.ಆರ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.