ಇ-ಕಾಮರ್ಸ್ ಕಂಪನಿಗೆ ವಂಚನೆ : ಗುಜರಾತ್ ಮೂಲದ ಮೂವರು ಸೆರೆ
ಬೆಂಗಳೂರು : ನಕಲಿ ಗ್ರಾಹಕರನ್ನು ಸೃಷ್ಟಿಸಿ ಆನ್‍ಲೈನ್ ಇ-ಕಾಮರ್ಸ್ ವೇದಿಕೆ ಮೀಶೋ ಕಂಪೆನಿಗೆ ವಂಚಿಸಿದ್ದ ಆರೋಪದಡಿ ಗುಜರಾತ್ ರಾಜ್ಯದ ಮೂವರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉತ್ತಮ್ ಕುಮಾರ್, ಪಾರ್ಥ್ ಭಾಯ್ ಹಾಗೂ ಮೌಲಿಕ್ ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಮೀಶೋ ಆ್ಯಪ್ ಮೂಲಕ ಗ್ರಾಹಕರು ವಿವಿಧ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್‍ಲೈನ್ ಅಥವಾ ನಗದು ಮೂಲಕ ಪಾವತಿಸಬಹುದು. ಆದರೆ, ಸೂರತ್‍ನಲ್ಲಿ ಓಂ ಸಾಯಿ ಫ್ಯಾಷನ್ ಎಂಬ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದ ಆರೋಪಿಗಳು, ಅದನ್ನು ಮಾರಾಟಗಾರ ಕಂಪನಿಯೆಂದು ಮೀಶೋದಲ್ಲಿ ರಿಜಿಸ್ಟರ್ ಮಾಡಿಸಿದ್ದರು.
ನಂತರ ಮೀಶೋ ಆ್ಯಪ್ ಬಳಸಿ ತಾವೇ ಗ್ರಾಹಕರ ಸೋಗಿನಲ್ಲಿ ನಕಲಿ ಹೆಸರು ಮತ್ತು ವಿಳಾಸ ನೀಡಿ ಪ್ರತೀ ದಿನ ವಿವಿಧ ಬೆಲೆಯ ಉತ್ಪನ್ನಗಳನ್ನು ಬುಕ್ ಮಾಡುತ್ತಿದ್ದರು. ಆ ರೀತಿ ತಪ್ಪಾಗಿ ನೀಡಿದ ಗ್ರಾಹಕರ ವಿಳಾಸದಿಂದ ಉತ್ಪನ್ನಗಳು ವಾಪಸ್ ಮಾರಾಟಗಾರ ಕಂಪನಿಯಾಗಿರುವ ಓಂ ಸಾಯಿ ಫ್ಯಾಷನ್‍ಗೆ ಹಿಂತಿರುಗುತ್ತಿದ್ದವು.
ಹಾಗೆ ಹಿಂತಿರುಗಿದ ಉತ್ಪನ್ನವಿರುವ ಪಾರ್ಸಲ್‍ನಲ್ಲಿರುವ ವಸ್ತುವನ್ನು ಬದಲಾಯಿಸುತ್ತಿದ್ದ ಆರೋಪಿಗಳು, 'ಪಾರ್ಸಲ್‍ನಲ್ಲಿದ್ದ ವಸ್ತು ಬದಲಾಗಿದೆ' ಎಂದು ವೀಡಿಯೋ ಮಾಡಿ ಆ ವೀಡಿಯೊವನ್ನು ಮೀಶೋ ಕಂಪನಿಯವರಿಗೆ ಕಳಿಸುತ್ತಿದ್ದರು. ಉತ್ಪನ್ನಗಳ ಮೌಲ್ಯದಷ್ಟು ಹಣವನ್ನು ಮೀಶೋ ಕಂಪನಿಯಿಂದ ಪಡೆದುಕೊಳ್ಳುತ್ತಿದ್ದರು.
ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ಮೀಶೋ ಕಂಪನಿಯಿಂದ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವು ಮೊಬೈಲ್ ಫೋನ್ ನಂಬರ್‌ಗಳ ಮಾಹಿತಿ ಸಂಗ್ರಹಿಸಿ ಗುಜರಾತ್‍ಗೆ ತೆರಳಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ರೀತಿ ಒಟ್ಟು 5.50 ಕೋಟಿ ರೂ.ಗಳನ್ನು ಇದುವರೆಗೂ ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.