ಬೆಂಗಳೂರನ್ನು ‘ಆರೋಗ್ಯ ಸಿಟಿ’ ಮಾಡಲು ಸರಕಾರ ಬದ್ಧ : ದಿನೇಶ್ ಗುಂಡೂರಾವ್

Update: 2024-12-03 15:29 GMT

ಬೆಂಗಳೂರು : ನಗರವನ್ನು ಭಾರತದ ಮೊದಲ ‘ಆರೋಗ್ಯ ಸಿಟಿ’ಯನ್ನಾಗಿ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿ-ಪ್ಯಾಕ್ ಹಾಗೂ ಆರೋಗ್ಯ ವರ್ಲ್ಡ್‌ ಸಂಸ್ಥೆ ಆಯೋಜಿಸಿದ್ದ ‘ಆರೋಗ್ಯ ಸಿಟಿ ಸಮ್ಮಿಟ್-2024’ನನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ನಮ್ಮೆಲ್ಲರ ಮೊದಲ ಪ್ರಾಶಸ್ತ್ಯವಾಗಬೇಕು. ಆದರೆ, ಇಂದು ಒಬೆಸಿಟಿ, ಡಯಾಬಿಟಿಸ್, ಬಿಪಿ, ಒತ್ತಡ ಹೀಗೆ ಅನೇಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಎಷ್ಟೇ ಕೆಲಸವಿದ್ದರೂ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ದಿನದಲ್ಲಿ ಒಂದಿಷ್ಟು ಕಾಲ ತೆಗೆದಿಡುವ ಅವಶ್ಯಕತೆ ಇದೆ. ನಮ್ಮ ನಗರವನ್ನು ಆರೋಗ್ಯ ಸಿಟಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಪ್ರತಿಜ್ಞೆಯ ಆಂದೋಲನ ಪ್ರಶಂಸನೀಯ, ಇದಕ್ಕೆ ನಮ್ಮ ಸರಕಾರದ ಸಂಪೂರ್ಣ ಬೆಂಬಲವಿದೆ ಎಂದರು.

ಸಕಾರದಿಂದಲೂ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಕೇವಲ ಸರ್ಕಾರದಿಂದ ಇಂಥ ಕೆಲಸಗಳು ಸಾಧ್ಯವಿಲ್ಲ, ನಮ್ಮೊಂದಿಗೆ ಎನ್‍ಜಿಒಗಳು ಕೈ ಜೋಡಿಸಿದಾಗ ಮಾತ್ರ ಎಲ್ಲೆಡೆ ಉತ್ತಮ ಆರೋಗ್ಯ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ವಲ್ರ್ಡ್ ಸಂಸ್ಥೆಯ ಸಂಸ್ಥಾಪಕಿ ಡಾ. ನಳಿನಿ ಸಾಲಿಗ್ರಾಮ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News