ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ : ಡಿ.ಎಸ್.ವೀರಯ್ಯ ವಿರುದ್ಧದ ಚಾರ್ಜ್ಶೀಟ್ಗೆ ಹೈಕೋರ್ಟ್ ತಡೆ
ಬೆಂಗಳೂರು : ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮದಲ್ಲಿ ಎರಡನೇ ಆರೋಪಿಯಾಗಿರುವ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿದೆ.
ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದು ಕೋರಿ ವೀರಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮೇಲಿನ ಆದೇಶ ನೀಡಿದೆ.
ಅಪರಿಚಿತ ವ್ಯಕ್ತಿಗಳ ವಿರುದ್ಧವಾಗಿ ದೂರು ದಾಖಲಾಗಿದೆ. ಆರೋಪಿ ಸೇರಿದಂತೆ ಸರಕಾರಿ ಸೇವಕರು ಮತ್ತಿತರರು ಇರುವುದರಿಂದ ಭ್ರಷ್ಟಾಚಾರ ಕಾಯಿದೆ ಸೆಕ್ಷನ್ 17 ಎ ಅಡಿಯಲ್ಲಿ ತಿಳಿಸಿರುವ ಅನುಮತಿಯಿಲ್ಲದೆ ತನಿಖೆ ನಡೆಸುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳು ಅಪರಿಚಿತರಾಗಿದ್ದು, 9 ತಿಂಗಳುಗಳ ಕಾಲ ತನಿಖೆ ನಡೆಸಲಾಗಿದೆ. ಇದಾದ ನಂತರ ಅರ್ಜಿದಾರರ ತನಿಖೆ ನಡೆಸುವುದಕ್ಕೆ ಸೆಕ್ಷನ್ 17 ಎ ಅಡಿಯಲ್ಲಿ ಮನವಿ ಮಾಡಲಾಗಿದೆ. ಆದ್ದರಿಂದ ಈ ಪ್ರಕ್ರಿಯೆಯಲ್ಲಿ ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.