ಸಂವಿಧಾನ ಓದು ಪ್ರಬಂಧ ಸ್ಪರ್ಧೆ | ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಮುಖ್ಯಮಂತ್ರಿ
ಬೆಂಗಳೂರು: ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ‘ಸಂವಿಧಾನ ಓದು ಅಭಿಯಾನ’ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಹುಮಾನಗಳನ್ನು ವಿತರಿಸಿದರು.
ವಿದ್ಯಾರ್ಥಿಗಳಿಗೆ ಸಂವಿಧಾನ ಪಾಠ ಮಾಡಿದ ಸಿಎಂ: ವಿಶ್ವದ ಎಲ್ಲ ಸಂವಿಧಾನಗಳಲ್ಲಿ ನಮ್ಮದು ಅತ್ಯಂತ ಶ್ರೇಷ್ಠ ಸಂವಿಧಾನ. ಸಂವಿಧಾನ ಪ್ರತಿಪಾದಿಸುವುದು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು. ಸಂವಿಧಾನ ಒಳ್ಳೆಯವರ ಕೈಯಲ್ಲಿ ಹೋದಾಗ ಒಳ್ಳೆಯದು, ಕೆಟ್ಟವರ ಕೈಯಲ್ಲಿದ್ದಾಗ ಕೆಟ್ಟದ್ದು ಆಗುವ ಸಂಭವವಿರುತ್ತದೆ. ಅಂಬೇಡ್ಕರ್ ಅವರೇ ಹೇಳಿರುವಂತೆ ಸಂವಿಧಾನದ ಸಫಲತೆ, ವಿಫಲತೆ ಇರುವುದು ಕಾರ್ಯರೂಪಕ್ಕೆ ತರುವವರ ಕೈಯಲ್ಲಿ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಂವಿಧಾನ ಪೀಠಿಕೆಯಲ್ಲಿ ಇಡೀ ಸಂವಿಧಾನದ ಸಾರಾಂಶ ಇದೆ. ಅಂಬೇಡ್ಕರ್ ಸಾಮಾಜಿಕ ವೈರುಧ್ಯವಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಎಚ್ಚರಿಸಿದ್ದರು. ಸಮಾಜದಲ್ಲಿ ಅಸಮಾನತೆ ಸೃಷ್ಟಿ ಯಾಗಲು ಕಾರಣ ಜಾತಿ ವ್ಯವಸ್ಥೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಸಮಾನ ಅವಕಾಶಗಳನ್ನು ನೀಡದೇ ಹೋದಲ್ಲಿ ಸಮಾಜದಲ್ಲಿ ಸಮಾನತೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಅವರು ಹೇಳಿರುವಂತೆ ಸ್ವಾತಂತ್ರ್ಯ ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ಸಿಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಆದುದರಿಂದಲೇ, ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು, ಅದರ ಆಶಯಗಳನ್ನು ತಿಳಿದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಪ್ರತಿ ಸರಕಾರವೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಮೂಲಭೂತವಾಗಿ ನಾವೆಲ್ಲ ಮನುಷ್ಯರು ಪರಸ್ಪರ ಪ್ರೀತಿ, ಗೌರವಗಳಿರಬೇಕು. ಅದೇ ನಾಡು, ನುಡಿ, ದೇಶಕ್ಕೆ ನೀಡುವ ಕೊಡುಗೆ. ಕುವೆಂಪು ಹೇಳಿರುವಂತೆ ಮನುಷ್ಯರು ವಿಶ್ವಮಾನವರಾಗಿ ಹುಟ್ಟುತ್ತೇವೆ, ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗಿ ಬಿಡುತ್ತೇವೆ. ಕಂದಾಚಾರ, ಮೌಢ್ಯ ಗಳಿಗೆ ಸಂವಿಧಾನದಲ್ಲಿ ಜಾಗವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
850 ವರ್ಷಗಳ ಹಿಂದೆ ಬಸವಾದಿ ಶರಣರು ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂದೇ ಪ್ರತಿಪಾದಿಸಿದರು. ಸಂವಿಧಾನದ ಪೀಠಿಕೆಯಲ್ಲೇ ಇಡೀ ಸಂವಿಧಾನದ ಸಾರಾಂಶ ಇದೆ. ಜಾತ್ಯತೀತತೆ, ಸಮಾಜವಾದ ಎರಡೂ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಬಳಿಕ ಸೇರ್ಪಡೆಯಾಯಿತು. ಇದನ್ನು ತೆಗೆಯಬೇಕು ಎಂದು ಕೆಲವರು ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್ ಜಾತ್ಯತೀತತೆ ಮತ್ತು ಸಮಾಜವಾದವನ್ನು ಎತ್ತಿ ಹಿಡಿಯಿತು ಎಂದು ಅವರು ಹೇಳಿದರು.
ಭಾರತದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು ಜಾತಿ ವ್ಯವಸ್ಥೆಯಿಂದ. ಜಾತಿ ಆಧಾರದ ಮೇಲೆ ಒಬ್ಬರ ಯೋಗ್ಯತೆ ಅಳೆಯುವುದು ಅನಾಗರಿಕತನ. ವಿದ್ಯೆ ಮತ್ತು ಸಂಪತ್ತು ಗಳಿಸುವ ಅವಕಾಶ ಶೂದ್ರರಿಗೆ ಮತ್ತು ಮಹಿಳೆಯರಿಗೆ ಇರಲಿಲ್ಲ. ಹೀಗಾಗಿ ಅಸಮಾನತೆ ಸೃಷ್ಟಿಯಾಯಿತು. ಅಪ್ಪ ಅಮ್ಮ ವಿದ್ಯಾವಂತರಾದರೆ ಮಾತ್ರ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುತ್ತಾರೆ ಎನ್ನುತ್ತಾ ತಾವು ವಿದ್ಯಾಭ್ಯಾಸದಿಂದ ವಂಚಿತರಾಗಿ ಬಳಿಕ ವಿದ್ಯೆ ಕಲಿತು ವಕೀಲರಾದ ಪ್ರಸಂಗವನ್ನು ಸಿದ್ದರಾಮಯ್ಯ ವಿವರಿಸಿದರು.
ನಮ್ಮ ಸಂವಿಧಾನದ ಹಕ್ಕುಗಳು ಏನೇನು ಅಂತ ಗೊತ್ತಿದ್ದರೆ ಮಾತ್ರ ಅವನ್ನು ಪಡೆದುಕೊಳ್ಳಬಹುದು. ಏಳು ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಇದನ್ನೆಲ್ಲಾ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ 2018ರಲ್ಲಿ ಸಂವಿಧಾನ ಓದು ಪುಸ್ತಕ ರಚನೆ ಮಾಡಿದ್ದಾರೆ. ವಿದ್ಯಾರ್ಥಿಗಳು, ವಕೀಲರು, ನಾಗರಿಕರು, ಸಂಘ ಸಂಸ್ಥೆಗಳು ಪ್ರತಿಯೊಬ್ಬರಲ್ಲೂ ಸಂವಿಧಾನ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಪದವಿ, ಸ್ನಾತಕೋತ್ತರ ಸೇರಿದಂತೆ ಒಟ್ಟು 200 ಕಾಲೇಜುಗಳ 397 ವಿದ್ಯಾರ್ಥಿಗಳು ಸಂವಿಧಾನ ಓದು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೋಲಾರದ ಬಸವೇಶ್ವರ ಕಾನೂನು ಕಾಲೇಜು ವಿದ್ಯಾರ್ಥಿನಿ ಎಚ್.ಎಚ್.ಶ್ರೀವಿದ್ಯಾ ಪ್ರಥಮ, ಕೊಪ್ಪಳದ ಎಸ್.ಪಿ.ಎಸ್.ಜೆ.ಎಸ್ ಕಾಲೇಜಿನ ಶಶಿಕಲಾ ಶಂಕರಪ್ಪ ದ್ವಿತೀಯ ಸ್ಥಾನ ಹಾಗೂ ಸಿರಿಗೆರೆ, ಚಿತ್ರದುರ್ಗ ಜಿಲ್ಲೆಯ ಎಂ.ಎಂ.ಬಿ.ಆರ್.ಡಿ.ಎಸ್ ಕಾಲೇಜಿನ ಶ್ರೀರಕ್ಷಾ ಕೆ.ಎಂ ತೃತೀಯ ಸ್ಥಾನ ಪಡೆದಿದ್ದಾರೆ. ಮೊದಲ ಮೂವರು ವಿಜೇತ ವಿದ್ಯಾರ್ಥಿಗಳಿಗೆ ಕ್ರಮವಾಗಿ 15 ಸಾವಿರ ರೂ., 10 ಸಾವಿರ ರೂ. ಹಾಗೂ 5 ಸಾವಿರ ರೂ.ಗಳಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಹಾಗೂ ಒಟ್ಟು 30 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ. ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.