ಬಿಜೆಪಿಯ ಪಕ್ಷ ಸಂಘಟನಾ ಸಭೆಯಲ್ಲಿಯೂ ಆಂತರಿಕ ಭಿನ್ನಮತದ್ದೇ ಚರ್ಚೆ

Update: 2024-12-03 14:26 GMT

ಬೆಂಗಳೂರು: ಬಿಜೆಪಿಯಲ್ಲಿನ ಆಂತರೀಕ ಭಿನ್ನಮತ ಶಮನಕ್ಕೆ ವರಿಷ್ಠರ ರಂಗಪ್ರವೇಶವಾಗಿದ್ದು, ಪಕ್ಷದ ಪ್ರಮುಖರ ಸಭೆಯಲ್ಲಿಯೂ ಹಿರಿಯ ಶಾಸಕ ಯತ್ನಾಳ್ ವಿರುದ್ಧ ದೂರು ಕೇಳಿಬಂದಿದೆ. ಈ ಮಧ್ಯೆ ಯತ್ನಾಳ್, ತಮ್ಮ ಬೆಂಬಲಿಗರೊಂದಿಗೆ ವರಿಷ್ಠರ ಭೇಟಿಗೆ ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ಕುತೂಹಲ ಮೂಡಿಸಿದೆ.

ಮಂಗಳವಾರ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಚುನಾವಣಾ ವೀಕ್ಷಕ ಮತ್ತು ಕೇಂದ್ರದ ಮಾಜಿ ಸಚಿವ ರಾಧಾಕೃಷ್ಣನ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡ ಉಪಸ್ಥಿತಿಯಲ್ಲಿ ಸದಸ್ಯತ್ವ ಅಭಿಯಾನ ‘ಸಂಘಟನಾ ಪರ್ವ’ ಕುರಿತು ಸಮಾಲೋಚನೆ ನಡೆಸಿದರು.

ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಉಲ್ಲೇಖಿಸದೆ ಹಲವು ಮುಖಂಡರು, ಪಕ್ಷ ಸಂಘಟನೆ ಇರುವ ತೊಡಕುಗಳು ಹಾಗೂ ಪಕ್ಷದಲ್ಲಿನ ‘ಗುಂಪು’ಗಾರಿಕೆಯ ಬಗ್ಗೆ ವರಿಷ್ಠರಿಗೆ ದೂರು ಸಲ್ಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷರು ಆಗ್ರಹಿಸಿದ್ದಾರೆಂದು ಗೊತ್ತಾಗಿದೆ.

ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡಿದರೆ ಪಕ್ಷಕ್ಕೆ ಮುಜುಗರ ಉಂಟಾಗಲಿದೆ. ಅಲ್ಲದೆ, ಪಕ್ಷಕ್ಕೆ ನಷ್ಟವು ಆಗಲಿದೆ ಎಂದು ಕೆಲ ಮುಖಂಡರು ಗಮನ ಸೆಳೆದಿದ್ದಾರೆಂದು ಹೇಳಲಾಗಿದೆ.

ಬಳಿಕ ಪ್ರತಿಕ್ರಿಯಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ‘ಪಕ್ಷದ ಈ ವಿಚಾರಗಳನ್ನು ನನ್ನೊಂದಿಗೆ ಮಾತನಾಡುವುದು ಬೇಡ. ಡಿ.7ಕ್ಕೆ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಆಗಮಿಸಲಿದ್ದು, ಅವರೊಂದಿಗೆ ಸಮಾಲೋಚನೆ ನಡೆಸಬೇಕು. ಇದೀಗ ಬೂತ್ ಸಮಿತಿ ನೇಮಕ ವೇಳೆ ಸಹಮತದಿಂದ ಕೆಲಸ ಮಾಡಬೇಕು. ಯಾವುದೇ ಸಮಸ್ಯೆಯಾಗಬಾರದು’ ಎಂದು ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ನಾವೆಲ್ಲರೂ ಒಟ್ಟಾಗಿದ್ದೇವೆ: ‘ಪಕ್ಷದ ಸಂಘಟನೆ ವಿಚಾರವಾಗಿ ನಾಲ್ಕು ಗಂಟೆ ಕಾಲ ಸಭೆ ಮಾಡಿದ್ದೇವೆ. ಪಕ್ಷದೊಳಗಿನ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅಸಮಾಧಾನಗಳನ್ನು ಶಮನಗೊಳಿಸುವ ಶಕ್ತಿ ಪಕ್ಷದ ವರಿಷ್ಠರಿಗಿದೆ. ವಾರದೊಳಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಪಕ್ಷದಲ್ಲಿ ಎಲ್ಲರೂ ಒಟ್ಟಿಗಿದ್ದೇವೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸಭೆಯ ಬಳಿಕ ಮಾಹಿತಿ ನೀಡಿದರು.

ಸಂಘಟನೆ ಬಲಪಡಿಸುತ್ತೇವೆ: ‘ಪಕ್ಷದ ಸಕ್ರಿಯ ಸದಸ್ಯತ್ವ ಅಭಿಯಾನದ ಬಗ್ಗೆ ಚರ್ಚಿಸಿದ್ದು, ಬೂತ್ ಸಮಿತಿ, ಮಂಡಲ ಸಮಿತಿ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಮುಖಂಡರು ಸಲಹೆ ನೀಡಿದ್ದಾರೆ. ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇವೆ’ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಸಭೆಯ ಬಳಿಕ ತಿಳಿಸಿದರು.

‘ಸಂಘಟನಾ ಪರ್ವ’ ಇಡೀ ದೇಶದಲ್ಲಿ ನಡೆಯುತ್ತಿದೆ. ಅದಕ್ಕೆ ಸೀಮಿತವಾಗಿ ಸಭೆ ನಡೆದಿದೆ. ಜಿಲ್ಲಾಧ್ಯಕ್ಷರು ಯಾವುದೇ ಮನವಿಯನ್ನು ರಾಷ್ಟ್ರೀಯ ನಾಯಕರಿಗೆ ಕೊಟ್ಟಿಲ್ಲ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಇದರಲ್ಲಿ ರಾಜಕೀಯ ಏನೂ ಇಲ್ಲ, ಖಂಡಿತವಾಗಿ ಅಭಿಪ್ರಾಯ ಸಂಗ್ರಹದಂತಹದ್ದು ಏನೂ ಇಲ್ಲ. ಅಭಿಪ್ರಾಯ ಸಂಗ್ರಹ ಮಾಡುವುದಾದರೆ ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್ ಬರುತ್ತಿದ್ದರು’ ಎಂದು ವಿಜಯೇಂದ್ರ ಹೇಳಿದರು.

‘ರಾಜ್ಯಾಧ್ಯಕ್ಷರನ್ನಾಗಿ ನನ್ನನ್ನು ಪಕ್ಷದ ರಾಷ್ಟ್ರೀಯಾಧ್ಯಕ್ಷರು ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸ್ವಂತ ಶಕ್ತಿ ಅಧಿಕಾರಕ್ಕೆ ಬರಬೇಕು. ಹೊಂದಾಣಿಕೆ ರಾಜಕೀಯಕ್ಕೂ ಇತಿಶ್ರೀ ಹಾಡಬೇಕು. ಬಿಜೆಪಿಯ ಹಿರಿಯ ಶಾಸಕ ಯತ್ನಾಳ್‍ಗೆ ನೋಟಿಸ್ ನೀಡಲಾಗಿದೆ. ಇದನ್ನು ವರಿಷ್ಠರು ಗಮನಿಸುತ್ತಿದ್ದು, ಶಿಸ್ತು ಕ್ರಮ ಕೈಗೊಳ್ಳಬೇಕಾ? ಅಥವಾ ಬೇಡವೇ? ಎಂದು ತೀರ್ಮಾನ ಮಾಡುತ್ತಾರೆ’

-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News