‘ಚೊಂಬಿನ ಚಿತ್ರ’ದ ಟೀಶರ್ಟ್ ಹಾಕಿ ಮತದಾನ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

Update: 2024-04-26 15:16 GMT

ಬೆಂಗಳೂರು : ಕೆಪಿಸಿಸಿ ಸೋಷಿಯಲ್ ಮೀಡಿಯಾ ತಂಡ, ಮತದಾನದ ದಿನ ಚೊಂಬು ಮತ್ತು ಕಾಂಗ್ರೆಸ್ ಗ್ಯಾರಂಟಿಗಳ ಚಿತ್ರವಿರುವ ಟೀ ಶರ್ಟ್ ಧರಿಸುವ ಮೂಲಕ ವಿಭಿನ್ನ ರೀತಿಯ ಅಭಿಯಾನ ಮಾಡಿ ಮತದಾನ ಮಾಡಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆ ವಾರ್ಡ್‌ ಮತಗಟ್ಟೆ ಸಂಖ್ಯೆ 194, 195ರಲ್ಲಿ ಕೆಪಿಸಿಸಿ ಸೋಷಿಯಲ್ ಮೀಡಿಯಾ ತಂಡ ಈ ವಿಶೇಷ ಅಭಿಯಾನದ ಮೂಲಕ ಬಿಜೆಪಿಗೆ ಲೇವಡಿ ಮಾಡಿದೆ.

ಯುವಕನೊಬ್ಬನ ಟೀ ಶರ್ಟ್ ಮೇಲೆ ಚೊಂಬೇಶ್ವರನ ಸಹವಾಸ ಮೂರ್ ಹೊತ್ತು ಉಪ್ವಾಸ ಎಂದು ಬರೆದಿದ್ದರೆ, ಉಳಿದವರ ಟೀ ಶರ್ಟ್ ಮೇಲೆ ಗ್ಯಾರಂಟಿಗಳು ಮತ್ತು ರೈತರ ಸಾಲಾಮನ್ನಾ ಗ್ಯಾರಂಟಿ ಚಿತ್ರವಿರುವುದನ್ನು ನೋಡಿ ಮತದಾರರು ಶ್ಲಾಗಿಸಿದ್ದಾರೆ.

ಇತ್ತೀಚಿಗೆ ಕೇಂದ್ರ ಸರಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಖಾಲಿ ಚೊಂಬು ಎಂದು ಸಾರುವ ವಿಭಿನ್ನ ರೀತಿಯ ಜಾಹೀರಾತನ್ನು ಕಾಂಗ್ರೆಸ್ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲಿ ನೀಡಿ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಮತದಾನದ ವೇಳೆಯೂ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಮತ್ತು ಗ್ಯಾರಂಟಿಗಳ ಪ್ರದರ್ಶನ ಮಾಡುತ್ತಿರುವುದು ಬಿಜೆಪಿಗೆ ತೀವ್ರ ಮುಖಭಂಗವಾದಂತಿದೆ.

ಚೊಂಬು, ಸಿಲಿಂಡರ್ ಪ್ರದರ್ಶನ: ಕರ್ನಾಟಕಕ್ಕೆ ಮೋದಿ ಸರಕಾರ ಕೊಟ್ಟ ಕೊಡುಗೆ ಚೊಂಬು' ಎಂಬ ಕಾಂಗ್ರೆಸ್ ಪಕ್ಷದ ಜಾಹೀರಾತಿಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ನಡುವೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಹಾಗೂ ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದ್ದಾರೆ.

ರಾಜಾಜಿನಗರದ ಮಂಜುನಾಥ್ ನಗರದಲ್ಲಿರುವ ಗೌತಮ್ ಕಾಲೇಜಿನ ಮತಗಟ್ಟೆ ಬಳಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹಾಗೂ ಕಾರ್ಯಾಧ್ಯಕ್ಷ ಮಂಜುನಾಥ್ ಅವರ ತಂಡ ಚೊಂಬು ಪ್ರದರ್ಶಿಸಿತು. ಇದೇ ವೇಳೆ ಯುವಕನೊಬ್ಬ ಪದವಿ ದಿರಿಸಿನಲ್ಲಿ ಬಂದು ಕೈಯಲ್ಲಿ ಚೊಂಬು ಹಿಡಿದು ಪರೋಕ್ಷವಾಗಿ ಟೀಕಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News