ಕ್ರಿಕೆಟ್ ಆಟವನ್ನು ರಾಜಕಾರಣಿಗಳಿಂದ ದೂರವಿಡಿ, ಆಟಗಾರರೇ ಮುನ್ನಡೆಸಿ : ಡಿ.ಕೆ.ಶಿವಕುಮಾರ್
ಬೆಂಗಳೂರು : ಕ್ರಿಕೆಟ್ ಆಟವನ್ನು ರಾಜಕಾರಣಿಗಳಿಂದ ದೂರವಿಡಬೇಕು. ಈ ಕ್ರೀಡೆಯನ್ನು ಆಟಗಾರರೇ ಮುನ್ನಡೆಸಿಕೊಂಡು ಹೋಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿ ಅವರ 75ನೆ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಆತ್ಮ ಚರಿತ್ರೆ ‘ಸ್ಟಂಪಡ್-ಲೈಫ್ ಬಿಯಾಂಡ್ ಅಂಡ್ ಬಿಯಾಂಡ್ ದಿ ಟ್ವೆಂಟಿ ಟು ಯಾಡ್ರ್ಸ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಹೀಗಾಗಿ ಕ್ರೀಡಾ ಚಟುವಟಿಕೆಗಳಿಂದ ಅವರನ್ನು ದೂರ ಇಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಾನೊಬ್ಬ ರಾಜಕಾರಣಿ, ಆದರೂ ಕಿರ್ಮಾನಿ ಅವರು ಈ ಕಾರ್ಯಕ್ರಮಕ್ಕೆ ನನಗೆ ಏಕೆ ಆಹ್ವಾನ ನೀಡಿದರೆಂದು ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರತಿಭೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಆ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಒಳ್ಳೆಯ ಗುಣ ನಿಮಗೆ ಸಹಾಯ ಮಾಡುತ್ತದೆ. ಕಿರ್ಮಾನಿ ಅವರು ಈ ಎರಡೂ ಗುಣಗಳನ್ನು ಹೊಂದಿದ್ದಾರೆ. ಕಿರ್ಮಾನಿ ಅವರು ಕೇವಲ ಕ್ರಿಕೆಟ್ ಪ್ರತಿಭೆಯಷ್ಟೇ ಅಲ್ಲ, ಅತ್ಯುತ್ತಮ ವ್ಯಕ್ತಿತ್ವ ಇರುವವರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ಪ್ರತಿನಿಧಿಸುವ ಆಟಗಾರನಾಗಿ ಭಾರತೀಯ ಕ್ರಿಕೆಟ್‍ಗೆ ಕಿರ್ಮಾನಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ‘ಶುದ್ಧ ಹೃದಯ ವಿಶ್ವದ ಶ್ರೇಷ್ಠ ದೇವಾಲಯ’ ಎಂದು ಹೇಳುತ್ತಾರೆ. ಕಿರ್ಮಾನಿ ಅವರು ಇಂತಹ ಶುದ್ಧ ಹೃದಯ ಹಾಗೂ ಮುಗುಳ್ನಗೆ ಹೊಂದಿರುವ ಹೃದಯವಂತ. ಇಂತಹವರು ಜಗತ್ತಿನಲ್ಲಿ ಬಹಳ ಅಪರೂಪ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕೆಎಸ್‍ಸಿಎ ಕಾರ್ಯದರ್ಶಿಯಾಗಿದ್ದ ನಾಗರಾಜ್ ಅವರ ಪುತ್ರ ಹಾಗೂ ನಾನು ಒಂದೇ ಶಾಲೆಯಲ್ಲಿ ಓದುತ್ತಿದ್ದೆವು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಕೆಎಸ್‍ಸಿಎಗೆ ಪತ್ರ ಬರೆದು ಭಾರತ-ಪಾಕಿಸ್ತಾನ ಪಂದ್ಯಗಳ ನೂರಾರು ಟಿಕೆಟ್ ಪಡೆದು ನಮ್ಮ ಹುಡುಗರಿಗೆ ಹಂಚಿದ್ದೆ ಎಂದು ಡಿ.ಕೆ.ಶಿವಕುಮಾರ್ ಮೆಲುಕು ಹಾಕಿದರು.
ಆಗಿನ ಕಾಲದ ಆಟಗಾರರು ಈಗಿನ ಕಾಲದಂತೆ ಅತ್ಯುತ್ತಮ ತರಬೇತಿ ಕೇಂದ್ರಗಳನ್ನು ಹೊಂದಿರಲಿಲ್ಲ. ಆದರೂ ದೊಡ್ಡ ಮಟ್ಟಕ್ಕೆ ಬೆಳೆದು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಪ್ರತಿಭೆ ಇದ್ದರೆ ಉನ್ನತ ಸ್ಥಾನಕ್ಕೆ ಏರುತ್ತೇವೆ, ಆದರೆ ಆ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ವ್ಯಕ್ತಿತ್ವ ಬಹಳ ಮುಖ್ಯ. ಇದಕ್ಕೆ ಕಿರ್ಮಾನಿ ಉತ್ತಮ ಉದಾಹರಣೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕಪಿಲ್ ದೇವ್ ಅವರು ಹೇಳಿದಂತೆ, ಅನುಭವದ ಮುಂದೆ ಬೇರೇನೂ ಇಲ್ಲ. ಅನುಭವ ವ್ಯಕ್ತಿಯನ್ನು ಪಕ್ವವಾಗಿಸುತ್ತದೆ. ನಿಮ್ಮ ನಡುವಣ ಬಾಂಧವ್ಯ ನೀರಿನಂತೆ. ಅದಕ್ಕೆ ಬಣ್ಣ, ರುಚಿ ಇಲ್ಲ. ಆದರೂ ಅದು ಬಹಳ ಮುಖ್ಯ. ನೀವು ಯಾವುದೇ ತಲೆಮಾರಿನವರಾಗಿರಿ, ಯಾವುದೇ ವಯೋಮಾನದವರಾಗಿರಿ, ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಹಾಗೂ ನೆನಪು ನಮಗೆ ಮಾದರಿಯಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ, ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಬ್ರಿಜೇಶ್ ಪಟೇಲ್, ವಿ.ವಿ.ಎಸ್.ಲಕ್ಷ್ಮಣ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.