ಯೋಗೇಶ್ವರ್ ಪಕ್ಷಕ್ಕೆ ಬಂದರೆ ಸ್ವಾಗತ : ಡಿ.ಕೆ.ಸುರೇಶ್

Update: 2024-10-22 13:26 GMT

ಬೆಂಗಳೂರು : ‘ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ಬರುವವರಿಗೆ ಸ್ವಾಗತವಿದೆ. ಯೋಗೇಶ್ವರ್ ಅಥವಾ ಮತ್ತೊಬ್ಬರು ಎಂದು ಪ್ರತ್ಯೇಕಿಸಿ ಹೇಳುವುದಿಲ್ಲ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್ ಪಕ್ಷಕ್ಕೆ ಸೇರ್ಪಡೆಗೆ ಸ್ವಾಗತಿಸಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ‘ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ಸದ್ಯಕ್ಕೆ ನನ್ನ ಮುಂದೆ ಇಲ್ಲ. ಅವರು ಹಿರಿಯ ನಾಯಕರು, ಮಾಜಿ ಸಚಿವರು, ಅನುಭವ ಇರುವವರು. ಅವರ ಎನ್‍ಡಿಎ ಮೈತ್ರಿ ಗಟ್ಟಿಯಾಗಿದ್ದು, ಅವರು ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದು ತಿಳಿಸಿದರು.

ಯೋಗೇಶ್ವರ್ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅದು ಅಂಗೀಕಾರವಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಚನ್ನಪಟ್ಟಣದಲ್ಲಿ ಇಂದು ಸಭೆ ಮಾಡುತ್ತಿರುವುದು ಗೊತ್ತಿದೆ. ಇದರ ಹೊರತಾಗಿ ಅವರು ಕಾಂಗ್ರೆಸ್ ಸೇರುವ ಕುರಿತು ಯಾವುದೇ ವಿಚಾರ ಗೊತ್ತಿಲ್ಲ ಎಂದು ಸುರೇಶ್ ಸ್ಪಷ್ಟಪಡಿಸಿದರು.

‘ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ನನಗೆ ಕರೆ ಮಾಡಿ ಸಿ.ಪಿ.ಯೋಗೇಶ್ವರ್ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಭೆಯ ವಾಸ್ತವಾಂಶ ಏನು ಎಂದು ಸಂಜೆಯ ಒಳಗಾಗಿ ತಿಳಿಯಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೂರು ತಿಂಗಳಿನಿಂದ ಜೆಡಿಎಸ್-ಬಿಜೆಪಿಯಿಂದ ಬರುವ ಎಲ್ಲ ಮುಖಂಡರನ್ನು ನಾವು ಸ್ವಾಗತಿಸಿದ್ದೇವೆ’ ಎಂದು ಸುರೇಶ್ ಹೇಳಿದರು.

ನಮ್ಮ ಪಕ್ಷದ ಮುಂದಿನ ನಡೆ ಹೇಗಿರಬೇಕೆಂದು ಜಿಲ್ಲೆಯ ಶಾಸಕರು ಹಾಗೂ ರಾಮನಗರ ಮುಖಂಡರ ಜತೆ ಚರ್ಚೆ ಮಾಡಿದ್ದು, ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದ್ದು, ಪಕ್ಷದಿಂದಲೇ ಹೋರಾಟ ಮಾಡಬೇಕೆಂದು ಸಲಹೆ ನೀಡಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಗೆಲ್ಲಲಿದೆ: ಕಾಂಗ್ರೆಸ್ ಪಕ್ಷ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲಿದೆ. ನನ್ನ ಮುಕ್ತ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಅವರು ತೀರ್ಮಾನ ಮಾಡಿದ ನಂತರ ನಾನು ತೀರ್ಮಾನ ಮಾಡುತ್ತೇನೆ. ಪಕ್ಷದ ಆದೇಶವನ್ನು ನಾನು ಪಾಲಿಸಬೇಕು, ನಮ್ಮ ಮುಖಂಡರೂ ಅದನ್ನೇ ಪಾಲಿಸಬೇಕು’ ಎಂದು ಎಂದು ಡಿ.ಕೆ.ಸುರೇಶ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News