ಹಣಕಾಸು ಆಯೋಗವು ಕರ್ನಾಟಕಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Update: 2024-03-24 15:29 GMT

ಬೆಂಗಳೂರು: ಕರ್ನಾಟಕಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಹೇಳಿಕೆ ಸಂಪೂರ್ಣ ಸುಳ್ಳು, ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ಅಂತಹ ಯಾವುದೇ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದಲ್ಲಿ ಚಿಂತಕರ ವೇದಿಕೆ ಆಯೋಜಿಸಿದ್ದ ‘ಅನೌಪಚಾರಿಕ ಸಂವಾದ’ದಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ನೀಡಬೇಕಿದ್ದ ಪ್ರತಿ ಪೈಸೆಯನ್ನು ಲೆಕ್ಕ ಹಾಕಿ, ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲಾಗಿದೆ. 2017 ರಿಂದ 2022ರ ನಡುವಿನ ಅವಧಿಯಲ್ಲಿ ರಾಜ್ಯದ ಜಿಎಸ್‍ಟಿ ಪಾಲಿನಲ್ಲಿ 1.06 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿದೆ. ಯಾವುದೇ ಜಿಎಸ್‍ಟಿ ಪರಿಹಾರವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ವಿವರಣೆ ನೀಡಿದರು.

ಪ್ರಧಾನಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ, ದೇಶದಾದ್ಯಂತ 80 ಕೋಟಿ ಜನರು ಮತ್ತು ಬೆಂಗಳೂರು ನಗರದ 30.5 ಲಕ್ಷ ಜನರು ಪ್ರತಿ ತಿಂಗಳು ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ. ದೇಶದಾದ್ಯಂತ 52 ಕೋಟಿ ಮಂದಿ ಜನ್-ಧನ್ ಖಾತೆಗಳನ್ನು ತರೆದಿದ್ದಾರೆ. ಬೆಂಗಳೂರು ನಗರದಲ್ಲೇ 14.68 ಲಕ್ಷ ಜನ್-ಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ನುರಿತ ಕುಶಲಕರ್ಮಿಗಳು 10 ಲಕ್ಷ ರೂ.ವರೆಗಿನ ಕಿರುಸಾಲವನ್ನು ಪಡೆಯಲು ಅನುವು ಮಾಡಿಕೊಡುವ ಕೇಂದ್ರದ ಪ್ರಮುಖ ಮುದ್ರಾ ಯೋಜನೆಯಡಿ ಬೆಂಗಳೂರು ನಗರಕ್ಕೆ 30,490 ಕೋಟಿ ರೂ.ಗಳನ್ನು ನೀಡಲಾಗಿದೆ. ಬೆಂಗಳೂರು ನಗರವೊಂದರಲ್ಲೇ 38.25 ಲಕ್ಷ ಮುದ್ರಾ ಯೋಜನೆಯ ಫಲಾನುಭವಿಗಳು ಇದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯವು ಎಸ್‍ಸಿ, ಎಸ್‍ಟಿ ಮತ್ತು ಮಹಿಳೆಯರಿಗೆ 10 ಲಕ್ಷದಿಂದ 1 ಕೋಟಿ ರೂಪಾಯಿಗಳ ಸಾಲ ನೀಡುವ ‘ಸ್ಟ್ಯಾಂಡ್-ಅಪ್ ಇಂಡಿಯಾ' ಅಡಿಯಲ್ಲಿ ಅನುದಾನವನ್ನು ಪಡೆದುಕೊಂಡಿದೆ. ನಗರದಲ್ಲಿ ಈ ಯೋಜನೆಯಡಿ 467 ಕೋಟಿ ರೂ. ಗಳನ್ನು ವಿತರಿಸಲಾಗಿದೆ. ಈ ನಗರವೊಂದರಲ್ಲೇ ಈ ಯೋಜನೆಯಡಿ 4,429 ನೋಂದಾಯಿತ ಫಲಾನುಭವಿಗಳಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಬೆಂಗಳೂರು ನಗರದ 1.25 ಲಕ್ಷ ಬೀದಿಬದಿ ವ್ಯಾಪಾರಿಗಳು ಪ್ರಧಾನಮಂತ್ರಿಯವರ ಸ್ವನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೆ. ಈ ಪೈಕಿ ಶೇ.62ರಷ್ಟು ಮಹಿಳೆಯರು, ಶೇ.31ರಷ್ಟು ಒಬಿಸಿ ಮತ್ತು ಶೇ.29ರಷ್ಟು ಎಸ್‍ಸಿ ಮತ್ತು ಎಸ್‍ಟಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ ಬೆಂಗಳೂರು ನಗರ ಪ್ರದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಜಿಎಸ್‍ಟಿ ಪೂರ್ವದ ಬೆಳವಣಿಗೆಯ ದರವು ಕೇವಲ ಶೇ.11.68 ರಷ್ಟಿದ್ದು, ಇಂದು ಅದು ಶೇ.15ಕ್ಕೆ ತಲುಪಿದೆ. ಜಿಎಸ್‍ಟಿ ನಿಮಗೆ ಪ್ರಯೋಜನವನ್ನು ಒದಗಿಸುತ್ತಿದ್ದು, ಕಾಂಗ್ರೆಸ್‍ಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

‘ಕರ್ನಾಟಕದಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್‍ಡಿಆರ್ ಎಫ್) ಅಡಿಯಲ್ಲಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News