ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ ಮೀನುಗಾರಿಕಾ ನೀತಿ: ಸಿದ್ದರಾಮಯ್ಯ

Update: 2025-03-07 11:35 IST
ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ ಮೀನುಗಾರಿಕಾ ನೀತಿ: ಸಿದ್ದರಾಮಯ್ಯ
  • whatsapp icon

ಬೆಂಗಳೂರು: ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಆಯವ್ಯಯ ಮಂಡಿಸುತ್ತಿದ್ದಾರೆ.

ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸಕ್ತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮ ವಹಿಸಲಾಗುವುದು. ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸಕ್ತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗುವುದು ಎಂದವರು ತಿಳಿಸಿದರು.

ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು

30 ಕೋಟಿ ರೂ. ಒದಗಿಸಲಾಗುವುದು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್ ನಲ್ಲಿ ಘೋಷಿಸಿದರು.

ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್ ಗಳನ್ನು ಬದಲಾಯಿಸಿ, ಹೊಸ ಇಂಜಿನ್ ಖರೀದಿಸಲು ಶೇ.50ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ ನೀಡಲಾಗುವುದು. ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್ ಮತ್ಸ್ಯದರ್ಶಿನಿಯನ್ನು ಪ್ರಾರಂಭಿಸಲಾಗುವುದು. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು 'ಮಲ್ಟಿ-ಲೆವೆಲ್ ಪಾರ್ಕಿಂಗ್' ವ್ಯವಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News