ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನ್ಮಾನ : ‘ಕೊಲೆಗೆ ಪ್ರಚೋದನೆ ಪ್ರಕರಣ’ ದಾಖಲಿಸಲು ಒತ್ತಾಯ

Update: 2024-10-22 13:16 GMT

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನ್ಮಾನ ಮಾಡಿದವರ ಮೇಲೆ ‘ಕೊಲೆಗೆ ಪ್ರಚೋದನೆ ಪ್ರಕರಣ’ ದಾಖಲಿಸಬೇಕು. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿ ‘ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗ’ದ ವತಿಯಿಂದ ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.

ಅತ್ಯಾಚಾರಿಗಳಿಗೆ, ಕೊಲೆಗಾರರಿಗೆ ಸನ್ಮಾನ ಮಾಡುವುದನ್ನು ಗುಜರಾತ್, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಆದರೆ, ಇದೀಗ ಕರ್ನಾಟಕ ರಾಜ್ಯದಲ್ಲಿ ಗೌರಿ ಹತ್ಯೆ ಮಾಡಿರುವ ಆರೋಪಿಗಳಿಗೆ ಸನ್ಮಾನ ಮಾಡಿರುವುದು ಈ ನೆಲ ಪೋಷಿಸಿಕೊಂಡು ಬಂದಿದ್ದ ಮಾನವೀಯ ಮೌಲ್ಯಗಳಿಗೆ ಕಳಂಕವಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಗೌರಿ ಸ್ಮಾರಕ ಟ್ರಸ್ಟ್‌ನ ಪ್ರೊ.ವಿ.ಎಸ್.ಶ್ರೀಧರ್ ಮಾತನಾಡಿ, ಕರ್ನಾಟಕದಲ್ಲಿ ಈ ರೀತಿಯ ಘಟನೆ ಮರುಕಳಿಸಬಾರದು. ಸನ್ಮಾನಿಸಿದವರು ಬಿಜೆಪಿಯ ಕಾರ್ಪೊರೇಟರ್ ಆಗಿದ್ದವರು ಮತ್ತು ಸಂಘ ಪರಿವಾರದವರೇ ಆಗಿದ್ದಾರೆ. ಇದರಿಂದ ಗೌರಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರು ಸಂಘಪರಿವಾರದ ಬೇರೆ-ಬೇರೆ ಅಂಗ ಸಂಸ್ಥೆಯವರು ಎಂಬುದು ಗೊತ್ತಾಗುತ್ತದೆ. ಈ ಸನ್ಮಾನ ಮಾಡಿ ಈ ರೀತಿಯ ಹತ್ಯೆಗಳ ರೂವಾರಿಗಳು ಎಂಬುವುದರ ಸೂಚನೆಯಾಗಿದೆ ಎಂದು ಹೇಳಿದರು.

ಕರ್ನಾಟಕ ಸೌಹಾರ್ದಕ್ಕೆ ಹೆಸರು ವಾಸಿಯಾದ ರಾಜ್ಯ. ಗೌರಿ ಹಂತಕರಿಗೆ ಸನ್ಮಾನಿಸುವ ಮೂಲಕ ರಾಜ್ಯದ ನಾಗರಿಕರಿಗೆ ಅವಮಾನಿಸಿದಂತೆ. ಕರ್ನಾಟಕ ಸರಕಾರ ಸನ್ಮಾನ ಮಾಡಿದವರ ವಿರುದ್ಧ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಅಂಕಣಕಾರ ಶಿವಸುಂದರ್ ಮಾತನಾಡಿ, ಸನ್ಮಾನ ಮಾಡುವುದು ಹತ್ಯೆಗೆ ಪ್ರಚೋದನೆ ನೀಡಿದಂತೆ ಎಂದು ನ್ಯಾಯಾಲಯ ಭಾವಿಸಬೇಕು. ಜಾಮೀನು ಕೊಟ್ಟರೆ ಕೆಲವು ಷರತ್ತು ನೀಡಬೇಕು. ಸನ್ಮಾನದಲ್ಲಿ ಭಾಗವಹಿಸುವುದು ಕೂಡ ಅಪರಾಧದ ಭಾಗವೇ ಆಗುತ್ತದೆ. ಆದ್ದರಿಂದ ಆರೋಪಿಗಳಿಗೆ ಸನ್ಮಾನಿಸುವುದು ಅಪರಾಧವಾಗಬೇಕು ಎಂದು ತಿಳಿಸಿದರು. ವಕೀಲ ವಿನಯ್ ಶ್ರೀನಿವಾಸ್, ಶಿಕ್ಷಣತಜ್ಞ ಶ್ರೀಪಾದ್ ಭಟ್, ಸಾಮಾಜಿಕ ಕಾರ್ಯಕರ್ತ ಮಲ್ಲು ಕುಂಬಾರ್, ಡಾ.ಬಿ.ಸಿ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

‘ಗೌರಿ ಲಂಕೇಶ್ ಅವರು ಸಮಾಜದ ಪರಿವರ್ತನೆಗಾಗಿ ಹೋರಾಟ ನಡೆಸಿದವರು. ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದವರು. ಗೌರಿ ಅಂತವರನು ಹತ್ಯೆ ಮಾಡಿದಾಗಲೂ ಸರಕಾರ ನಿಸ್ತೇಜವಾಗಿದೆ. ಸರಕಾರದ ಮೇಲೆ ನಂಬಿಕೆ ಇಟ್ಟಿದ್ದೇವೆ. ತ್ವರಿತಗತಿಯಲ್ಲಿ ಗೌರಿ ಲಂಕೇಶ್ ಹಂತಕರಿಗೆ ಶಿಕ್ಷೆ ನೀಡಬೇಕು’

-ಎಸ್.ವರಲಕ್ಷ್ಮಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ

ಡಿಜಿಪಿ, ಎಡಿಜಿಪಿಗೆ ಮನವಿ: ಗೌರಿ ಹತ್ಯೆಯ ಆರೋಪಿ ಶ್ರೀಕಾಂತ್ ಹೊಂಗರಕರ್ ಜಾಮೀನಿನ ಮೇಲೆ ಹೊರ ಬಂದ ಕೂಡಲೇ ಸನ್ಮಾನಿಸಿರುವುದನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಗೌರಿ ಕೊಲೆ ವಿಚಾರಣೆಯನ್ನು ಶೀಘ್ರಗೊಳಿಸಬೇಕು ಎಂದು ಆಗ್ರಹಿಸಿ ಡಿಜಿಪಿ ಮತ್ತು ಎಡಿಜಿಪಿಗೆ ಮನವಿ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News