ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 700 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿ : ಎಚ್‌ಡಿಕೆ ಆಗ್ರಹ

Update: 2024-05-01 13:34 GMT

ಎಚ್.ಡಿ. ಕುಮಾರಸ್ವಾಮಿ (Photo : X/@hd_kumaraswamy)

ಬೆಂಗಳೂರು : ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 700 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, "ಬರದಿಂದ ಕಂಗೆಟ್ಟ ರೈತರ ಹಾಹಾಕಾರ ಒಂದೆಡೆಯಾದರೆ, ಹಾಲಿನ ಸಬ್ಸಿಡಿಯನ್ನೂ ಕೊಡದೇ ದೋಖಾ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ. ಹಾಲು ಉತ್ಪಾದಕರ ಸಬ್ಸಿಡಿ ಹಣ 700 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಸರಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಕೃಷಿ ಅನುದಾನಕ್ಕೆ 32 ಶೇ. ಕತ್ತರಿ ಹಾಕಿದ್ದಾಯಿತು. ಈಗ ಹೈನುಗಾರರ ಸಬ್ಸಿಡಿಗೂ ಪಂಗನಾಮ. ಒಂದು ಲೀಟರ್ ಹಾಲಿನ ಸಬ್ಸಿಡಿಯನ್ನು 7 ಹೆಚ್ಚಿಸುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಸುಳ್ಳು ಹೇಳಿದ್ದೇ ಹೇಳಿದ್ದು. ಹೆಚ್ಚಿಸುವ ಮಾತಿರಲಿ, ಇದ್ದ ಸಬ್ಸಿಡಿಯನ್ನೂ (ಲೀಟರ್ ಹಾಲಿಗೆ 5 ರೂ.) ಕೊಡದೇ 7 ತಿಂಗಳಿಂದ ಸತಾಯಿಸುತ್ತಿದೆ ಎಂದು  ಕಟುವಾಗಿ ಟೀಕಿಸಿದ್ದಾರೆ.

ಗೋವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವೂ ಸಿಗುತ್ತಿಲ್ಲ. ಇಂಥ ಕಡು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಕೂಡಲೇ ರಾಜ್ಯ ಸರಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News