ಬೆಂಗಳೂರು | ಪತ್ನಿಯ ಕಿರುಕುಳ ಆರೋಪ: ರಾಜಭವನದ ಮುಂದೆ ಪತಿ ಆತ್ಮಹತ್ಯೆಗೆ ಯತ್ನ
Update: 2025-04-13 19:40 IST

ಬೆಂಗಳೂರು : ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊರ್ವ ರಾಜಭವನದ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರವಿವಾರ ಆರ್.ಟಿ ನಗರದ ನಿವಾಸಿ ಆಗಿರುವ ವ್ಯಕ್ತಿಯೊಬ್ಬ, ರಾಜಭವನ ಮುಂದೆ ಆಗಮಿಸಿ ಏಕಾಏಕಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ರಕ್ಷಿಸಿದ್ದಾರೆ.
ಪತ್ನಿ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆರೋಪಿಸಿದ್ದು, ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ನನಗೆ ಬದುಕಲು ದಾರಿ ಇಲ್ಲ, ಸಾಯುವುದೊಂದೇ ದಾರಿ ಎಂದು ಬೇಸರ ಹೊರಹಾಕಿದ್ದಾರೆ.
ಸದ್ಯ ವಿಧಾನಸೌಧ ಠಾಣೆಯ ಪೊಲೀಸರು ವ್ಯಕ್ತಿಯನ್ನು ಕರೆದೊಯ್ದಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ.