ಅಂಬೇಡ್ಕರ್ ಜಯಂತಿ, ಬುದ್ದ ಪೂರ್ಣಿಮೆಯೆಂದು ಖೈದಿಗಳಿಗೆ ಸಿಹಿ ವಿತರಿಸಲು ಸರಕಾರ ಆದೇಶ
ಬೆಂಗಳೂರು : ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಖೈದಿಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ(ಎ.14) ಮತ್ತು ಬುದ್ದಪೂರ್ಣಿಮದಂದು(ಮೇ 12) ಸಿಹಿ ತಿಂಡಿಯನ್ನು ವಿತರಿಸಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕಾರಾಗೃಹಗಳಲ್ಲಿ ಬಂದಿಗಳಿಗೆ ಕೆಲವು ವಿಶೇಷ/ಪ್ರಮಿಖ ದಿನಗಳಂದು ಸಹಿಯನ್ನು ವಿತರಿಸಲಾಗುತ್ತಿದೆ. ಹೀಗಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ಹಾಗೂ ಬುದ್ದಪೂರ್ಣಿಮದಂದು ಸಿಹಿಯನ್ನು ವಿತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರವನ್ನು ಬರೆದಿದ್ದರು. ಇದನ್ನು ಪರಿಗಣಿಸಿ ಸರಕಾರ ಆದೇಶ ಹೊರಡಿಸಿದೆ.
ಈಗಾಗಲೇ ಕಾರಾಗೃಹಗಳಲ್ಲಿ ಬಂದಿಗಳಿಗೆ ಗಣರಾಜೋತ್ಸವ, ಯುಗಾದಿ, ಬಸವ ಜಯಂತಿ, ಸ್ವಾತಂತ್ರೋತ್ಸವ, ರಂಝಾನ್, ವಿಜಯದಶಮಿ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ, ಕ್ರಿಸ್‍ಮಸ್, ಹೊಸವರ್ಷ, ಬಕ್ರೀದ್, ಸಂಕ್ರಾಂತಿ, ದೀಪಾವಳಿ, ಈಸ್ಟರ್ ಹಾಗೂ ಗೌರಿ-ಗಣೇಶ ಹಬ್ಬಗಳಿಗೆ ಸಹಿಯನ್ನು ವಿತರಿಸಲಾಗುತ್ತಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.