ಅಕ್ರಮವಾಗಿ ಮಾರಾಟವಾದ ಎಲ್ಲ ಅರಣ್ಯ ಭೂಮಿ ಹಿಂಪಡೆಯಲು ಕ್ರಮ ವಹಿಸಲಿ : ಎಚ್‍ಡಿಕೆ ವಿರುದ್ಧ ಈಶ್ವರ್ ಖಂಡ್ರೆ ಆಕ್ರೋಶ
ಬೆಂಗಳೂರು : ಅರಣ್ಯ ಭೂಮಿಯನ್ನು ಮಾರಾಟ, ದಾನ ಮಾಡಲು ಯಾರಿಗೂ ಅವಕಾಶವಿಲ್ಲ, ಎಚ್‍ಎಂಟಿ ವಶದಲ್ಲಿರುವ ಅರಣ್ಯ ಭೂಮಿ ಮರು ವಶಕ್ಕೆ ಪಡೆದ ಬಳಿಕ ಅಲ್ಲಿ ವೃಕ್ಷೋಧ್ಯಾನ ನಿರ್ಮಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಚ್.ಎಂ.ಟಿ. ವಶದಲ್ಲಿರುವ ಜಮೀನು ಪಡೆದು ಯಾರಿಗೆ ಮಾರುತ್ತೀರಿ ಎಂದು ಕೇಳಿದ್ದಾರೆ. ಅರಣ್ಯ ಭೂಮಿ ಮಾರಾಟ ಮಾಡಿರುವುದು ಈಗ ನಿಮ್ಮ ಇಲಾಖಾ ವ್ಯಾಪ್ತಿಯಲ್ಲಿರುವ ಎಚ್.ಎಂ.ಟಿ.ಯೇ ಹೊರತು ಅರಣ್ಯ ಇಲಾಖೆ ಅಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ಪ್ರಮುಖ ಭಾಗದಲ್ಲಿರುವ ಪೀಣ್ಯ ಜಾಲಹಳ್ಳಿ ಅರಣ್ಯ ಜಮೀನು ಮರು ವಶಕ್ಕೆ ಪಡೆದು ಶುದ್ಧ ಉಸಿರಾಟಕ್ಕೊಂದು ತಾಣ ನಿರ್ಮಾಣ ಮಾಡಲು ಬಯಸಿದ್ದೇವೆ. ಕೇಂದ್ರ ಸರಕಾರಿ ಸ್ವಾಮ್ಯದ ಎಚ್.ಎಂ.ಟಿ. ರಿಯಲ್ ಎಸ್ಟೇಟ್ ಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.
1997 ರಿಂದ 2011ರವರೆಗೆ ಎಚ್.ಎಂ.ಟಿ. ಸಂಸ್ಥೆ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಡಾಲರ್ಸ್ ಕನ್ ಸ್ಟ್ರಕ್ಷನ್ಸ್ ಅಂಡ್ ಎಂಜಿನಿಯರ್ಸ್ ಪ್ರೈ.ಲಿ., ಯು.ಎಸ್.ಸ್ಟೀಲ್ ಕಂಪನಿ, ಸಿಲ್ವರ್ ಲೈನ್ ಎಸ್ಟೇಟ್ಸ್, ಮನೆ ಕನ್ ಸ್ಟ್ರಕ್ಷನ್ಸ್ ಲಿ, ಎಂ.ಎಂ.ಆರ್. ಕನ್ ಸ್ಟ್ರಕ್ಷನ್ಸ್, ಬ್ರಿಗೇಡ್ ಎಂಟರ್ ಪ್ರೈಸಸ್, ಬಾಗಮನೆ ಡೆವಲಪರ್ಸ್ ಪ್ರೈ.ಲಿ. ಸೇರಿದಂತೆ ಹಲವು ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಿಗೆ 165 ಎಕರೆ ಭೂಮಿಯನ್ನು 313 ಕೋಟಿ ರೂ.ಗೂ ಹೆಚ್ಚು ಹಣಕ್ಕೆ ಮಾರಾಟ ಮಾಡಿದೆ ಎಂದು ಈಶ್ವರ್ ಖಂಡ್ರೆ ದೂರಿದರು.
ಪರಿಸರ ಹೋರಾಟಗಾರರೊಬ್ಬರು ಕಳೆದ ಜು.11ರಂದು ತಮ್ಮ ಕಚೇರಿಗೆ ನೀಡಿದ ದೂರು ಆಧರಿಸಿ, ಅಧಿಕಾರಿಗಳ ಸಭೆ ಕರೆದು ಚರ್ಚಿಸಿದಾಗ ಸತ್ಯ ಹೊರಬಿತ್ತು. ಹೀಗಾಗಿ ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅಂದರೆ 1896ರ ಜೂ.11ರಲ್ಲೇ ಅಧಿಸೂಚಿತ ಅರಣ್ಯ ಗೆಜೆಟ್ ಆಗಿದೆ ಎಂದು ಅವರು ಹೇಳಿದರು.
ಈ ಭೂಮಿಯನ್ನು 1963ರಲ್ಲಿ ಎಚ್.ಎಂ.ಟಿ.ಗೆ ದಾನ ನೀಡಿರುವುದಾಗಿ ಹೇಳಲಾಗಿದೆ. ಈಗ ಕುಮಾರಸ್ವಾಮಿ ಭೂಮಿಯನ್ನು ಎಚ್.ಎಂ.ಟಿ ಸಂಸ್ಥೆ ಖರೀದಿಸಿರುವುದಾಗಿ ಹೇಳುತ್ತಿದ್ದಾರೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಮಾಡದೆ, 1980ರ ಅರಣ್ಯ ಸಂರಕ್ಷಣಾ ಕಾಯಿದೆ ಸೆಕ್ಷನ್ 2ರ ಅಡಿಯಲ್ಲಿ ಕೇಂದ್ರ ಸರಕಾರದಿಂದ ಪೂರ್ವಾನುಮತಿ ಪಡೆಯದೆ ಮಾರಾಟ ಮಾಡಲು ಅಥವಾ ದಾನ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ರಾಜ್ಯಕ್ಕೆ ಬೆಳಕು ನೀಡಿ, ಪ್ರಸಕ್ತ ಕತ್ತಲಲ್ಲಿ ಬದುಕು ಕಳೆಯುವಂತಾಗಿರುವ ಶರಾವತಿ ಸಂತ್ರಸ್ತರಿಗೆ ಭೂಮಿ ನೀಡಿರುವ ಕುರಿತಂತೆ ರಾಜ್ಯ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಖ್ಯೆ 43037-2019ಕ್ಕೆ ಸಂಬಂಧಿಸಿದಂತೆ 2021ರ ಮಾ.4ರಂದು ಬಂದಿರುವ ತೀರ್ಪು ಇದನ್ನು ಸ್ಪಷ್ಟಪಡಿಸುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ‘ಒಮ್ಮೆ ಅರಣ್ಯ ಎಂದಾದರೆ ಅದು ಅರಣ್ಯ-ಪರಿಸರ ನಾಗರಿಕ ಹಕ್ಕುಗಳಿಗಿಂತ ಹೆಚ್ಚು’ ಎಂದು ಅಭಿಪ್ರಾಯಪಟ್ಟಿದೆ ಎಂದ ಅವರು, ಇದು ಅರಣ್ಯ ಅಲ್ಲದಿದ್ದರೆ ಏಕೆ ಮಧ್ಯಂತರ ಅರ್ಜಿ ಹಾಕುತ್ತಿದ್ದರು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಜೊತೆ ಸಂಘರ್ಷ ಇಲ್ಲ: ತಮ್ಮ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ಉತ್ತಮ ಸೌಹಾರ್ದ ಬಾಂಧವ್ಯವಿದೆ. ನಾನು ಹಿಂದೆಯೂ ದ್ವೇಷದ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ನಾನು ಯಾವುದೇ ಪೂರ್ವಾಗ್ರಹ ಪೀಡಿತನಾಗಿ ಎಚ್.ಎಂ.ಟಿ. ಭೂಮಿ ವಿಚಾರ ಪ್ರಸ್ತಾಪಿಸಿಲ್ಲ. ಬದಲಾಗಿ ತಮಗೆ ಬಂದ ದೂರಿನ ಮೇಲೆ ಸಚಿವನಾಗಿ ಕ್ರಮ ವಹಿಸಿದ್ದೇನೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ಒಂದು ವರ್ಷದಲ್ಲಿ 101 ಎಕರೆ ಅರಣ್ಯ ಒತ್ತುವರಿ ತೆರವು: ತಾವು ಅರಣ್ಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ತರುವಾಯ, ಅರಣ್ಯ ವಿಸ್ತರಣೆ ಮತ್ತು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದರು.
ಬೆಂಗಳೂರಿನ ಕೊತ್ತನೂರಿನಲ್ಲಿ ಸುಮಾರು 500 ಕೋಟಿ ರೂ. ಬೆಲೆ ಬಾಳುವ 17.34 ಎಕರೆ, ಬಿ.ಎಂ. ಕಾವಲಿನಲ್ಲಿ ಸುಮಾರು 100 ಕೋಟಿ ರೂ.ಮೌಲ್ಯದ 15 ಎಕರೆ, ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲಿನಲ್ಲಿ 200 ಕೋಟಿ ರೂ.ಮೌಲ್ಯದ 18 ಎಕರೆ, ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 50 ಕೋಟಿ ರೂ.ಬೆಲೆ ಬಾಳುವ 7 ಎಕರೆ ಸೇರಿದಂತೆ ಒಟ್ಟು 101 ಎಕರೆ 20 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.
ಉತ್ತರ ಕನ್ನಡದ ಶಿರೂರು ಮತ್ತು ವಯನಾಡಿನಲ್ಲಿ ಗುಡ್ಡ ಕುಸಿತ ಆದ ಬಳಿಕ ನೂರಾರು ಜನರು ಮೃತಪಟ್ಟಿರುವ ಧಾರುಣ ಘಟನೆಯ ಬಳಿಕವೂ ನಾವು ಅರಣ್ಯ, ಪ್ರಕೃತಿ ಪರಿಸರ ಉಳಿಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಖಂಡಿತಾ ಕ್ಷಮಿಸುವುದಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.