ಅಪಹರಣ ಪ್ರಕರಣ : ಎಚ್‌.ಡಿ.ರೇವಣ್ಣ ಮನೆಯಲ್ಲಿ ಸಂತ್ರಸ್ತೆಯೊಂದಿಗೆ ‘ಎಸ್‌ಐಟಿ’ ಅಧಿಕಾರಿಗಳಿಂದ ಮಹಜರು

Update: 2024-05-06 14:09 GMT

ಬೆಂಗಳೂರು : ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಆರೋಪ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖಾಧಿಕಾರಿಗಳು, ಕಸ್ಟಡಿಯಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು ನಡೆಸಿದರು.

ಸೋಮವಾರ ಪೊಲೀಸ್ ವಾಹನದಲ್ಲಿ ಸಂತ್ರಸ್ತೆಯನ್ನು ರೇವಣ್ಣ ಅವರ ಬಸವನಗುಡಿ ಮನೆಗೆ ಕರೆದೊಯ್ದಿದ್ದ ಅಧಿಕಾರಿಗಳು, ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಘಟನೆಯ ಮರುಸೃಷ್ಟಿ ಮಾಡಿ, ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ಇದೆಲ್ಲ ಅಂಶವನ್ನು ಅಧಿಕಾರಿಗಳು, ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಿದ್ದಾರೆ.

ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗುವುದಲ್ಲದೇ ವಿಡಿಯೊ ತೋರಿಸಿ ಬೆದರಿಕೆವೊಡ್ಡಿದ್ದಾರೆ. ಹಲವು ಬಾರಿ ವಿಡಿಯೊ ಕರೆ ಮಾಡಿ ದೌರ್ಜನ್ಯವೆಸಗಿದ್ದರು ಎಂದು ಸಂತ್ರಸ್ತೆ ನೀಡಿದ ದೂರು ಅಧರಿಸಿ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಎಸ್‌ಐಟಿ, ಸಿಆರ್ ಪಿಸಿ 164ಡಿಅಡಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದರು. ಸಂತ್ರಸ್ತೆ ನೀಡಿದ ವಿವರಗಳ ಆಧಾರದ ಮೇಲೆ ರೇವಣ್ಣ ಮನೆಯಲ್ಲಿಯೂ ಮಹಜರು ಪ್ರಕ್ರಿಯೆ ನಡೆಸಿದರು.

ವಕೀಲ ಆಕ್ಷೇಪ: ವಕೀಲ ಗೋಪಾಲ್ ಮಹಜರು ಪ್ರಕ್ರಿಯೆ ಕುರಿತು ಮಾತನಾಡಿ, ನಮ್ಮ ಕಕ್ಷಿದಾರ ಎಚ್.ಡಿ.ರೇವಣ್ಣ ಹೊಳೆನರಸೀಪುರ ಮನೆಯಲ್ಲಿ ಮಹಜರು ನಡೆದಿತ್ತು. ಇದೀಗ ಮತ್ತೊಂದು ಪ್ರಕರಣದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಹಜರು ಮಾಡುವ ಸಂದರ್ಭದಲ್ಲಿ ನೋಟಿಸ್ ಕೊಡಬೇಕು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಜರು ಪ್ರಕ್ರಿಯೆ ಮಾಡಲಾಗಿದೆ ಎಂದು ಹೇಳಿದರು.

ಎರಡನೆ ಆರೋಪಿಯೂ ಸಿಟ್ ಕಸ್ಟಡಿಗೆ: ‘ಅಶ್ಲೀಲ ವಿಡಿಯೋ ಸಂಬಂಧ ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣದ ಎರಡನೆ ಆರೋಪಿ ಸತೀಶ್ ಬಾಬು ಎಂಬುವರನ್ನು ಮೇ 13ರ ವರೆಗೂ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿ, ನಗರದ 17ನೆ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಸತೀಶ್ ಬಾಬು ಪ್ರಕರಣದಲ್ಲಿ ಮುಖ್ಯವಾದ ಎನ್ನಲಾಗಿದೆ. ಮಹಿಳೆಯನ್ನು ಮೊದಲನೆ ಆರೋಪಿಯ ಬಳಿ ಬಿಟ್ಟಿದ್ದಾನೆ. ಆದ್ದರಿಂದ ಪ್ರಕರಣದಲ್ಲಿ ಯಾರ ಪಾತ್ರವಿದೆ ಎಂಬ ಸ್ಪಷ್ಟತೆಯ ಅಗತ್ಯ ಇರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಎಸ್‌ಐಟಿ ಪರ ವಕೀಲ ಬಿ.ಎನ್. ಜಗದೀಶ್ ಅವರು ವಾದ ಮಂಡಿಸಿದ್ದರು.

ಆಗ ಸತೀಶ್ ಬಾಬು ಪರ ವಕೀಲ ಪ್ರಮೋದ್, ಕೆ.ಆರ್.ನಗರದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಯಾವುದೇ ಮಾಹಿತಿ ನೀಡದೇ ಎಸ್‌ಐಟಿ ಗೆ ವರ್ಗಾಯಿಸಲಾಗಿದೆ. ಇದರಲ್ಲಿ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವೂ ಮೇ.13 ರವರೆಗೂ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿ ಆದೇಶಿಸಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News